ಉಡುಪಿಯ ಕೋಟ್ಯಾಧಿಪತಿ ಉದ್ಯಮಿ ಭಾಸ್ಕರ್ ಶೆಟ್ಟಿಯವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪೊಲೀಸರ ವಶದಲ್ಲಿರುವ ಜ್ಯೋತಿಷಿ ನಿರಂಜನ್ ಭಟ್ ನ ತಂದೆ ಶ್ರೀನಿವಾಸ್ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರ ಬಂಧನಕ್ಕೊಳಗಾದವರಾಗಿದ್ದಾರೆ.
ತಮ್ಮ ಮನೆಯಲ್ಲೇ ಮಗ ಹಾಗೂ ಪತ್ನಿಯಿಂದ ಭಾಸ್ಕರ್ ಶೆಟ್ಟಿ ಹತ್ಯೆಗೊಳಗಾಗಿದ್ದು, ಬಳಿಕ ಅವರ ಶವವನ್ನು ನಂದಳಿಕೆಯಲ್ಲಿರುವ ನಿರಂಜನ್ ಭಟ್ ಮನೆಯ ಹೋಮಕುಂಡದಲ್ಲಿ ಸುಡಲಾಗಿದ್ದು, ಇದರ ಮಾಹಿತಿ ಇದ್ದರೂ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪದ ಮೇಲೆ ಶ್ರೀನಿವಾಸ್ ಭಟ್ ಹಾಗೂ ರಾಘವೇಂದ್ರ ಬಂಧನಕ್ಕೊಳಗಾಗಿದ್ದಾರೆಂದು ಹೇಳಲಾಗಿದೆ.
ಇವರಿಬ್ಬರ ಬಂಧನದೊಂದಿಗೆ ಭಾಸ್ಕರ್ ಶೆಟ್ಟಿಯವರ ಹತ್ಯೆ ಪ್ರಕರಣದಲ್ಲಿ ಒಟ್ಟು 5 ಮಂದಿ ಬಂಧನಕ್ಕೊಳಗಾದಂತಾಗಿದೆ. ಈ ಮೊದಲೇ ಭಾಸ್ಕರ್ ಶೆಟ್ಟಿಯವರ ಪತ್ನಿ ರಾಜೇಶ್ವರಿ ಹಾಗೂ ಪುತ್ರ ನವನೀತ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದು, ಬಳಿಕ ಜ್ಯೋತಿಷಿ ನಿರಂಜನ್ ಭಟ್ ನನ್ನು ವಶಕ್ಕೆ ಪಡೆದಿದ್ದರು.
ಈ ವೇಳೆ ನಿರಂಜನ್ ಭಟ್ ತನ್ನ ಕೈ ಬೆರಳಲ್ಲಿದ್ದ ವಜ್ರದ ಉಂಗುರ ಹಾಗೂ ಕಿವಿ ಓಲೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನಿಗೆ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ಹೇಳಲಾಗಿದೆ.