ಚೆನ್ನೈ: ಆತುರದ ಕೈಗೆ ಬುದ್ಧಿ ಕೊಟ್ಟರೆ ಏನೆಲ್ಲಾ ಯಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಜಗಳವಾಡಿಕೊಂಡು ಪತಿಯೇ ಸಿಟ್ಟಿನಿಂದ ಪತ್ನಿಗೆ ಬೆಂಕಿ ಹಚ್ಚಿದ ಘಟನೆ ಚೆನ್ನೈನಲ್ಲಿ ನಡೆದಿದೆ.
ಓಲಾ ಕ್ಯಾಬ್ ಚಾಲಕನಾಗಿರುವ ನಾಗರಾಜನ್ ಎಂಬಾತ ಪತ್ನಿ ಪ್ರೇಮಾರನ್ನು ಕೊಲೆ ಮಾಡಿದ್ದಾನೆ. ಚೆನ್ನೈನ ತೆಯ್ನಾಮ್ ಪೇಟ್ ಗೆ ಕಾರಿನಲ್ಲಿ ಇಬ್ಬರು ಮಕ್ಕಳೊಂದಿಗೆ ನಾಗರಾಜನ್ ಹೋಗುತ್ತಿದ್ದ. ದಂಪತಿ ನಡುವೆ ಮನೆಯಲ್ಲಿಯೇ ಜಗಳವಾಗಿದ್ದು, ಕಾರಿನಲ್ಲಿ ಹೋಗುವಾಗಲೂ ಅದು ಮುಂದುವರೆದಿತ್ತು. ಇದರಿಂದ ಸಿಟ್ಟಾದ ಪತ್ನಿ ಗಂಡನಿಗೆ ಹೆದರಿಸಲು ಕಾರಿನಲ್ಲಿದ್ದ ಪೆಟ್ರೋಲ್ ಬಾಟಲಿಯನ್ನು ತೆಗೆದುಕೊಂಡು ಮೈಮೇಲೆ ಸುರಿದುಕೊಂಡು ಸಾಯುತ್ತೇನೆ ಎಂದಿದ್ದಾಳೆ.
ಸಿಟ್ಟಿನಲ್ಲಿದ್ದ ಗಂಡ ಕಾರಿಗೆ ಬೆಂಕಿ ಹಚ್ಚಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆ ಆವರಿಸಿದೆ. ಪತ್ನಿ ಮೃತಪಟ್ಟರೆ, ಇಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ.