ಬೆಂಗಳೂರು: ಟೋಪಿ ಹಾಕಿಸಿಕೊಳ್ಳುವವರು ಇರುವವರೆಗೂ ಹಾಕುವವರೂ ಇರುತ್ತಾರೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅದೆಷ್ಟೋ ವಂಚನೆ ಪ್ರಕರಣ ನಡೆದಿವೆ. ಆದರೂ, ತಿಳಿಯದ ಮುಗ್ಧ ಜನರು ಗುಂಡಿಗೆ ಬೀಳುತ್ತಾರೆ.
ಹೀಗೆ ಜನರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ್ದ ಮಹಿಳೆಯೊಬ್ಬಳನ್ನು ಅರ್ಧರಾತ್ರಿಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ, ಸಹಕಾರಿ ಬ್ಯಾಂಕ್ ಒಂದರಲ್ಲಿ ಸಾಲ ಕೊಡಿಸುವುದಾಗಿ ಮುಗ್ಧ ಜನರಿಂದ ಸುಮಾರು 72 ಕೋಟಿ ರೂ. ಸಂಗ್ರಹಿಸಿದ್ದಾಳೆ ಎನ್ನಲಾಗಿದೆ. ಈಕೆಯನ್ನು ನಂಬಿದ ಕೂಲಿ ಕಾರ್ಮಿಕರು, ಬಡವರು ಹಣ ಹೊಂದಿಸಿಕೊಟ್ಟಿದ್ದಾರೆ.
ಹಣ ಪಡೆದ ಮಹಿಳೆ ಜನರಿಗೆ ವಂಚಿಸಿದ್ದು, ಬೆದರಿಕೆ ಕೂಡ ಹಾಕಿದ್ದಾಳೆ. ಕಳೆದ ವಾರ ಹಣ ಕೇಳಿದ ಮಹಿಳೆ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಳು. ಆಕೆಯ ಸಂಗಡಿಗನನ್ನು ಪೊಲೀಸರು ಬಂಧಿಸಿದ್ದರು. ನಿನ್ನೆ ರಾತ್ರಿ ಮಹಿಳೆ ಮನೆಯಲ್ಲಿರುವುದನ್ನು ಕಂಡ ಹಣ ಕಳೆದುಕೊಂಡವರು ಆಕೆಯನ್ನು ಮನೆಯಿಂದ ಎಳೆದು ತಂದಿದ್ದಾರೆ.
ನಡು ರಸ್ತೆಯಲ್ಲೇ ವಂಚನೆಗೊಳಗಾದ ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಿ.ಕೆ. ಅಚ್ಚುಕಟ್ಟು ಪೊಲೀಸರು, ಆರೋಪಿ ಮಹಿಳೆ ಹಾಗೂ ವಂಚನೆಗೆ ಒಳಗಾದವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.