ಭೋಪಾಲ್: ದೇಶದಲ್ಲಿ ಕಪ್ಪುಹಣ, ತೆರಿಗೆ ವಂಚನೆ, ಹವಾಲಾ ಮೊದಲಾದ ಪದಗಳು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ, ಕೇಳಿ ಬರುತ್ತವೆ. ಇಂತಹ ಹಣಕಾಸಿನ ವ್ಯವಹಾರವೊಂದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.
ಇಬ್ಬರು ಬಡ ಕುಟುಂಬದ ವ್ಯಕ್ತಿಗಳ ಖಾತೆಯಿಂದ ಅವರಿಗೆ ಗೊತ್ತಿಲ್ಲದೆಯೇ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇದರಿಂದಾಗಿ ಪೇಚಿಗೆ ಸಿಲುಕಿದ ಇಬ್ಬರೂ, ಆದಾಯ ತೆರಿಗೆ ಇಲಾಖೆ ಕಚೇರಿಗೆ ಅಲೆಯುವಂತಾಗಿದೆ. ಮಧ್ಯಪ್ರದೇಶದ ಕಟನಿ ನಿವಾಸಿಯಾದ ಎಲೆಕ್ಟ್ರಿಷಿಯನ್ ರಜನೀಶ್ ಕುಮಾರ್ ತಿವಾರಿ ಹಾಗೂ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುವ ಉಮದೂತ್ ಹಲ್ದ್ ಕರ್ ಅವರ ಬ್ಯಾಂಕ್ ಖಾತೆಗೆ ಬರೋಬ್ಬರಿ 16 ಕೋಟಿ ರೂ. ಜಮಾ ಆಗಿ, ನಂತರ ಡ್ರಾ ಮಾಡಲಾಗಿದೆ.
ಇದು ಬಹಳ ವರ್ಷಗಳ ಹಿಂದೆಯೇ ನಡೆದಿದ್ದು, ಇವರಿಬ್ಬರ ಗಮನಕ್ಕೆ ಬಂದೇ ಇಲ್ಲ. ಇವರದೇ ದಾಖಲೆಗಳನ್ನು ನೀಡಿ, ಆಕ್ಸಿಸ್ ಬ್ಯಾಂಕ್ ನಲ್ಲಿ ಖಾತೆ ತೆರೆದು, ಹಣ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಇದೀಗ ಐ.ಟಿ.ಇಲಾಖೆ ಇಬ್ಬರಿಗೂ ನೋಟೀಸ್ ನೀಡಿದ್ದು, ಅವರು ಕಚೇರಿಗೆ ಅಲೆಯುವಂತಾಗಿದೆ.
ತಿಂಗಳಿಗೆ ಅಲ್ಪಸ್ವಲ್ಪ ಹಣ ಸಂಪಾದಿಸಿ ಜೀವನ ನಡೆಸುವ ಬಡಕುಟುಂಬದ ಇವರಿಬ್ಬರ ಖಾತೆಗೆ ಅವರಿಗೇ ಗೊತ್ತಿಲ್ಲದಂತೆ ಕೋಟ್ಯಂತರ ರೂ. ಹಣ ಬಂದು ಹೋಗಿದೆ. ಪೊಲೀಸರೂ ಕೂಡ ಹವಾಲಾ ಹಣ ವರ್ಗಾವಣೆಯಾಗಿರಬಹುದೆಂದು ತನಿಖೆ ಕೈಗೊಂಡಿದ್ದಾರೆ.