ಶಿವಮೊಗ್ಗ: ಶ್ರಾವಣ ಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ಶ್ರಾವಣ ಮಾಸದಲ್ಲಿ ನಾಗ ಚೌತಿ, ನಾಗ ಪಂಚಮಿಯಂದು ಕಲ್ಲಿನ ನಾಗರಕ್ಕೆ ಇಲ್ಲವೇ, ಮಣ್ಣಿನ ನಾಗರಕ್ಕೆ ಹಾಲೆರೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಶಿವಮೊಗ್ಗದ ವೆಂಕಟೇಶ ನಗರದಲ್ಲಿರುವ ಬಸವ ಕೇಂದ್ರದಲ್ಲಿ ಹಾವಿಗೆ ಹಾಲೆರೆಯದೇ, ಮಕ್ಕಳಿಗೆ ಕುಡಿಯಲು ಕೊಡುವಂತೆ ಜಾಗೃತಿ ಮೂಡಿಸಲಾಯಿತು. ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ ನೇತೃತ್ವದಲ್ಲಿ ಕಲ್ಲಿನ ನಾಗರಕ್ಕೆ ಹಾಲೆರೆಯದೇ ಮಕ್ಕಳಿಗೆ ಕೊಡಿ ಎಂದು ತಿಳಿ ಹೇಳಲಾಯಿತು. ಹಾವುಗಳು ಸಾಮಾನ್ಯವಾಗಿ ಹಾಲು ಕುಡಿಯುವುದಿಲ್ಲ. ಸಸ್ತನಿಗಳು ಮಾತ್ರ ಹಾಲುಣಿಸುತ್ತವೆ. ಮೊಟ್ಟೆ ಇಡುವ ಜೀವಿಗಳು ಹಾಲುಣಿಸುವುದಿಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಹಾವು ರೈತನ ಮಿತ್ರ. ಜಮೀನುಗಳಲ್ಲಿ ಇಲಿ ಮೊದಲಾದವುಗಳನ್ನು ತಿನ್ನುತ್ತದೆ. ಆ ಮೂಲಕ ಹಾವು ರೈತನಿಗೆ ನೆರವಾಗುತ್ತದೆ. ಹಾವುಗಳನ್ನು ರಕ್ಷಿಸಬೇಕು ಎಂದು ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಹಾಲು ಕೊಡುವ ಮೂಲಕ ಜಾಗೃತಿ ಮೂಡಿಸಲಾಯಿತು.