ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ ನಾಗರ ಪಂಚಮಿ. ಈ ಹಬ್ಬದಲ್ಲಿ ನಾಗರಕಟ್ಟೆಗೆ ಇಲ್ಲವೇ ಹುತ್ತಕ್ಕೆ ಹಾಲೆರೆದು ಪೂಜಿಸುವುದು ಸಾಮಾನ್ಯ ಸಂಗತಿ. ಆದರೆ ಚೇಳಿಗೂ ನಾಗರ ಪಂಚಮಿ ದಿನ ಪೂಜಿಸುವ ಗ್ರಾಮದ ಬಗ್ಗೆ ಕೇಳಿದ್ದೀರಾ?
ಆ ಗ್ರಾಮ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿದೆ. ಯಾದಗಿರಿ ಸಮೀಪದ ಕಂದಕೂರು ಎಂಬ ಗ್ರಾಮದಲ್ಲಿ ನಾಗರ ಪಂಚಮಿ ದಿನ ಚೇಳಿಗೆ ಪೂಜೆ ಮಾಡಲಾಗುತ್ತದೆ. ಅದು ಜೀವಂತ ಚೇಳಿಗೆ ಎಂದರೆ ನೀವು ನಂಬಲೇಬೇಕು. ಗ್ರಾಮಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿ ಚೌಡೇಶ್ವರಿ ದೇವಾಲಯವಿದೆ. ಈ ಬೆಟ್ಟದಲ್ಲಿ ನಾಗರ ಪಂಚಮಿ ದಿನ ಚೇಳಿನ ಜಾತ್ರೆ ನಡೆಯುತ್ತದೆ. ಜಾತ್ರೆಗಾಗಿ ಕರ್ನಾಟಕ ಮಾತ್ರವಲ್ಲದೇ, ಮಹಾರಾಷ್ಟ್ರ, ತೆಲಂಗಾಣ ಮೊದಲಾದ ರಾಜ್ಯಗಳಿಂದಲೂ ಜನ ಬರುತ್ತಾರೆ.
ಹೀಗೆ ಬರುವ ಜನ ದೇವಾಲಯದಲ್ಲಿನ ಚೇಳಿನ ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ. ನಂತರ ಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಕಾಣಸಿಗುವ ಚೇಳುಗಳನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾರೆ. ಅವನ್ನು ಬಾಯಲ್ಲಿ ಹಾಕಿಕೊಳ್ಳುತ್ತಾರೆ. ಮೈಮೇಲೆ ಬಿಟ್ಟುಕೊಳ್ಳುತ್ತಾರೆ. ಆದರೂ ಚೇಳು ಯಾರಿಗೂ ಕಚ್ಚುವುದಿಲ್ಲ. ಕಚ್ಚಿದರೂ ನಾಗರ ಪಂಚಮಿ ದಿನ ವಿಷವೇರುವುದಿಲ್ಲ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.