ಶ್ರೀನಗರ: ದೇಶದ ಗಡಿಯಲ್ಲಿ ಎಷ್ಟೆಲ್ಲಾ ಭದ್ರತೆ ಬಿಗಿಗೊಳಿಸಿದ್ದರೂ, ಉಗ್ರರು ನುಸುಳಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಾರೆ. ಹೀಗೆ ಜಮ್ಮು ಕಾಶ್ಮೀರದ ದಕ್ಷಿಣ ಪುಲ್ವಾಮ ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೂವರು ಉಗ್ರರನ್ನು ಗಡಿಭದ್ರತಾ ಪಡೆ ಹೊಡೆದುರುಳಿಸಿದೆ.
ಪುಲ್ವಾಮ ಜಿಲ್ಲೆಯ ಪಂಜ್ ಗ್ರಾಮ್ ಎಂಬಲ್ಲಿ ಉಗ್ರರು ನುಸುಳಿರುವ ಮಾಹಿತಿ ಅರಿತ ಗಡಿಭದ್ರತಾ ಪಡೆಯ ಸಿಬ್ಬಂದಿ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಉಗ್ರರು ಕೂಡ ತೀವ್ರ ಪ್ರತಿರೋಧ ತೋರಿದ್ದು, ಅಂತಿಮವಾಗಿ ಮೇಲುಗೈ ಸಾಧಿಸಿದ ಭದ್ರತಾ ಪಡೆ ಸಿಬ್ಬಂದಿ, ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಮೃತ ಉಗ್ರರು ಡೋಗಿಪುರದವರಾಗಿದ್ದು, ಪಾಕಿಸ್ತಾನದಿಂದ ತರಬೇತಿ ಪಡೆದುಕೊಂಡು ಬಂದಿದ್ದರೆನ್ನಲಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಇವರು ಸೇರಿದ್ದು, ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟುಕೊಂಡಿದ್ದರು. ಅವರು ಅಡಗಿರುವ ಮಾಹಿತಿ ತಿಳಿದು ದಾಳಿ ನಡೆಸಲಾಗಿತ್ತು ಎಂದು ತಿಳಿದುಬಂದಿದೆ.