ಆತ ಉದಯೋನ್ಮುಖ ಬಾಕ್ಸರ್. 60 ಕೆ.ಜಿ. ಲೈಟ್ ವೇಯ್ಟ್ ವಿಭಾಗದಲ್ಲಿ ಪಾಲ್ಗೊಂಡು 2011 ಹಾಗೂ 2013 ರಲ್ಲಿ ವಿಜೇತನೂ ಆಗಿದ್ದ. ಜೊತೆಗೆ ಒಲಂಪಿಕ್ಸ್ ನಲ್ಲಿ ಬಾಕ್ಸಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಬೇಕೆಂಬ ಕನಸು ಕಾಣುತ್ತಿದ್ದ. ಆದರೆ ಮಾಡಬಾರದ ಕೆಲಸ ಮಾಡಿ ಇದೀಗ ಜೈಲು ಪಾಲಾಗಿದ್ದಾನೆ.
ಇದು ಜ್ಯೂನಿಯರ್ ಬಾಕ್ಸರ್ ದೀಪಕ್ ಪಹಾಲ್ ನ ಕಥೆ. ಈತ, ಪೊಲೀಸರ ವಶದಲ್ಲಿದ್ದ ಕುಖ್ಯಾತ ಪಾತಕಿ ಜಿತೇಂದರ್ ತಪ್ಪಿಸಿಕೊಳ್ಳಲು ನೆರವಾದನೆಂಬ ಕಾರಣಕ್ಕೆ ಈಗ ಬಂಧನಕ್ಕೊಳಗಾಗಿದ್ದಾನೆ. ಜುಲೈ 30 ರಂದು ಉತ್ತರ ದೆಹಲಿಯ ರೋಹಿಣಿ ಜೈಲಿನಿಂದ ಸೋನೆಪಾತ್ ನ್ಯಾಯಾಲಯಕ್ಕೆ ಜಿತೇಂದರ್ ನನ್ನು ಬಸ್ ನಲ್ಲಿ ಕರೆದುಕೊಂಡು ಹೋಗುವ ವೇಳೆ 10 ಜನರ ತಂಡದೊಂದಿಗೆ ದೀಪಕ್ ಪೊಲೀಸರ ಮೇಲೆ ದಾಳಿ ಮಾಡಿದ್ದ.
ಜಿತೇಂದರ್ ನ ಕಾವಲಿಗಿದ್ದ ಪೊಲೀಸರ ಕಣ್ಣಿಗೆ ಖಾರದ ಪುಡಿ ಎರಚಿದ ಈ ತಂಡ, ಅವರ ಮೇಲೆ ಹಲ್ಲೆ ಮಾಡಿತ್ತಲ್ಲದೇ ಅವರುಗಳ ಬಳಿಯಿಂದ ಬಂದೂಕು ಹಾಗೂ ಗುಂಡುಗಳನ್ನು ಕಿತ್ತುಕೊಂಡು ಪರಾರಿಯಾಗಿತ್ತು. ಇದೀಗ ದೀಪಕ್ ನನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ದೇಶದ ಉದಯೋನ್ಮುಖ ಬಾಕ್ಸರ್ ಒಬ್ಬ ತನ್ನ ಕ್ರಿಮಿನಲ್ ಕೃತ್ಯಕ್ಕಾಗಿ ಪರಿತಪಿಸುವಂತಾಗಿದೆ.