ಈಶಾನ್ಯ ಭಾರತದ 7 ರಾಜ್ಯಗಳಲ್ಲಿ ಒಂದಾಗಿರುವ ತ್ರಿಪುರಾ ಭವ್ಯ ಸಂಸ್ಕೃತಿಯನ್ನು ಬಿಂಬಿಸುವ ರಾಜ್ಯವಾಗಿದೆ. ಹಚ್ಚ ಹಸಿರಿನ ಕಣಿವೆ, ಬೆಟ್ಟಗುಡ್ಡಗಳಿಂದಾಗಿ ಕಣ್ಮನ ಸೆಳೆಯುತ್ತದೆ. ಬಾಂಗ್ಲಾ ಗಡಿಯಲ್ಲಿರುವ ತ್ರಿಪುರಾ ದೇಶದ 3 ನೇ ಚಿಕ್ಕರಾಜ್ಯಗಳಲ್ಲಿ ಒಂದಾಗಿದೆ.
ತ್ರಿಪುರಾದಲ್ಲಿ ಸುಮಾರು 19 ವಿವಿಧ ಬುಡಕಟ್ಟು ಸಮುದಾಯಗಳು ವಾಸವಾಗಿವೆ. ತ್ರಿಪುರ್ ಎಂಬ ರಾಜ ಇಲ್ಲಿ ಆಳ್ವಿಕೆ ನಡೆಸುತ್ತಿದ್ದ ಕಾರಣಕ್ಕೆ ತ್ರಿಪುರಾ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ. ಬ್ರಿಟೀಷರ ಕಾಲದಲ್ಲಿ ಇದು ಉತ್ತಮ ಸ್ಥಾನದಲ್ಲಿತ್ತು ಎನ್ನಲಾಗಿದೆ. ವಿವಿಧ ಭಾಷೆಗಳ ಜನರು ಇಲ್ಲಿ ನೆಲೆಸಿದ್ದಾರೆ. ಪ್ರತಿ ಬುಡಕಟ್ಟು ಜನಾಂಗದವರು ತಮ್ಮ ಸಂಸ್ಕೃತಿಯ ಅನುಸಾರ ವೈವಿಧ್ಯಮಯವಾಗಿ ಹಬ್ಬ ಆಚರಿಸುತ್ತಾರೆ. ಇಲ್ಲಿನ, ನೃತ್ಯ, ಸಂಗೀತಗಳು ಕೂಡ ಪ್ರಮುಖವಾಗಿವೆ.
ಗೋರಿಯಾ ನೃತ್ಯ, ಹೊಜ್ಜಗಿರಿ ನೃತ್ಯ, ಲಿಬಂಗ್ ನೃತ್ಯ, ಮೋಸ್ಕ್ ಸುಲ್ಮನಿ ನೃತ್ಯಗಳು ಗಮನಸೆಳೆಯುತ್ತವೆ. ಅಲ್ಲದೇ, ಕರಕುಶಲ ವಸ್ತುಗಳಿಗೂ ತ್ರಿಪುರಾ ಹೆಸರುವಾಸಿಯಾಗಿದೆ. ಅಗರ್ತಲಾದಲ್ಲಿರುವ ಜಗನ್ನಾಥ ದೇವಾಲಯ, ಉಮಾಮಹೇಶ್ವರಿ ದೇವಾಲಗಳು ಐತಿಹಾಸಿಕ ದೇವಾಲಗಳಾಗಿದ್ದು, ಶ್ರೀಮಂತ ಪರಂಪರೆ ಹೊಂದಿವೆ.
ರೋಸ್ ವ್ಯಾಲಿ ಅಮ್ಯೂಸ್ ಮೆಂಟ್ ಪಾರ್ಕ್ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ದಲಾಯಿ, ಕೈಲಾಶಹರ್, ಉದಯಪುರದ ತ್ರಿಪುರ ಸುಂದರಿ ದೇವಾಲಯ, ಟೀ ಎಸ್ಟೇಟ್ ಗಳು, ಅರಮನೆ, ಮ್ಯೂಸಿಯಂ ಸೇರಿದಂತೆ ಅನೇಕ ನೋಡಬಹುದಾದ ಸ್ಥಳಗಳು ಇಲ್ಲಿವೆ. ಪ್ರವಾಸೋದ್ಯಮ ಇಲಾಖೆಯಿಂದ ಮಾಹಿತಿ ಪಡೆದು ಹೋಗಬಹುದಾಗಿದೆ.