ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರ ದತ್ತು ಪುತ್ರಿ, ಸೈಕಲ್ ರಿಪೇರಿ ಮಾಡುವವನನ್ನು ಪ್ರೀತಿಸಿದ್ದು, ಆತನನ್ನೇ ಮದುವೆಯಾಗಲು ಮುಂದಾಗಿದ್ದಾಳೆ. 18 ವರ್ಷದ ಪ್ರತ್ಯುಷಾ ಹೀಗೆ ಹಠ ಮಾಡುತ್ತಿರುವ ಯುವತಿ.
ಪ್ರತ್ಯುಷಾ ಮಲತಾಯಿಯಿಂದ ಕಿರುಕುಳ ಅನುಭವಿಸಿ, ಮಕ್ಕಳ ಸಂರಕ್ಷಣಾ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಳು. ಆಕೆಯ ಬಗ್ಗೆ ತಿಳಿದುಕೊಂಡ ಸಿಎಂ ಚಂದ್ರಶೇಖರರಾವ್, ದತ್ತು ಪಡೆದು ಆಕೆಯ ಇಚ್ಛೆಯಂತೆ ನರ್ಸಿಂಗ್ ಕೋರ್ಸ್ ಗೆ ಸೇರಿಸಿದ್ದರು. ಆಕೆಯನ್ನು ಹಾಸ್ಟೆಲ್ ನಲ್ಲಿ ಇಟ್ಟು ಓದಿಸುತ್ತಿದ್ದರು. ತಮ್ಮ ಕುಟುಂಬದವರೊಂದಿಗೆ ಊಟ ಮಾಡಲು ಆಹ್ವಾನಿಸಿದ್ದರು. ಆಕೆಯ ಹೆಸರಿನಲ್ಲಿ 6.5 ಲಕ್ಷ ರೂ. ಠೇವಣಿ ಇಟ್ಟು, ಓದಿಸುತ್ತಿದ್ದರು.
ಪ್ರತ್ಯುಷಾ ಹಾಸ್ಟೆಲ್ ಪಕ್ಕದಲ್ಲೇ ಸೈಕಲ್ ರಿಪೇರಿ ಮಾಡುತ್ತಿರುವ 29 ವರ್ಷದ ವೆಂಕಟರೆಡ್ಡಿ ಎಂಬುವವನನ್ನು ಪ್ರೀತಿಸುತ್ತಿದ್ದು, ಆತನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ವೆಂಕಟರೆಡ್ಡಿ ಪೂರ್ವಾಪರ ತಿಳಿದುಕೊಳ್ಳುವಂತೆ ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ. ಅಲ್ಲದೇ, ಓದು ಮುಂದುವರೆಸುವಂತೆ ಪ್ರತ್ಯುಷಾಗೆ ಸೂಚಿಸಿದೆ.