ನೆಚ್ಚಿನ ನಟ-ನಟಿಯರನ್ನು ನೋಡಲು ಅಭಿಮಾನಿಗಳು ಕಾತರರಾಗಿರ್ತಾರೆ. ಜೀವನದಲ್ಲಿ ಒಮ್ಮೆ ನಟನನ್ನು ನೋಡಬೇಕೆಂಬ ಮಹದಾಸೆಯಿಂದ ದೂರದ ಊರುಗಳಿಂದ ಪಟ್ಟಣಕ್ಕೆ ಬರುವ ಅಭಿಮಾನಿಗಳಿಗೇನು ಕಡಿಮೆ ಇಲ್ಲ. ಇದೇ ಉದ್ದೇಶದಿಂದ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಗೆ ಕೂಡ ಅಭಿಮಾನಿಯೊಬ್ಬ ಬಂದಿದ್ದ. ಆದ್ರೆ ಆತ ಬಂದ ರೀತಿ ಮಾತ್ರ ಸರಿಯಿರಲಿಲ್ಲ.
ಭಾನುವಾರ ಮಧ್ಯಾಹ್ನ 1-2 ಗಂಟೆ ಸುಮಾರಿಗೆ ಅಮಿತಾಬ್ ಮನೆಗೆ ವ್ಯಕ್ತಿಯೊಬ್ಬ ನುಗ್ಗಿದ್ದ. ಭದ್ರತಾ ಸಿಬ್ಬಂದಿಯ ಕಣ್ಣು ತಪ್ಪಿಸಿ ಆ ವ್ಯಕ್ತಿ ಅಮಿತಾಬ್ ಬಚ್ಚನ್ ಮನೆಯ ಕಂಪೌಂಡ್ ಹಾರಿ ಒಳಗೆ ಬಂದಿದ್ದ ಎನ್ನಲಾಗಿದೆ. 25 ವರ್ಷದ ಬುಲೆಟ್ ಬನ್ವಾರಿ ಲಾಲ್ ಯಾದವ್ ಎಂಬಾತನೇ ಅಮಿತಾಬ್ ಮನೆಯೊಳಗೆ ಹೋಗಲು ಯತ್ನಿಸಿದ ಆರೋಪಿ. ಬಿಹಾರದ ನಿವಾಸಿಯಾದ ಈತ ತಾನು ಗಾಯಕ ಎಂದು ಹೇಳಿದ್ದಾನೆ.
ಆತ ಮನೆ ಪ್ರವೇಶಿಸಿದ ವೇಳೆ ಅಮಿತಾಬ್ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ಸೂಚನೆ ಸಿಕ್ಕ ತಕ್ಷಣ ಸ್ಥಳಕ್ಕೆ ಬಂದ ಜುಹು ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.