ಸಿನಿಮಾ ತಾರೆಯರೆಂದರೆ ಸಾಮಾನ್ಯವಾಗಿ ಐಷಾರಾಮಿ ಜೀವನ ಕಳೆಯುತ್ತಾರೆ. ಜನ ಸಾಮಾನ್ಯರ ಕಷ್ಟನಷ್ಟಗಳ ಅರಿವು ಅವರಿಗಿರುವುದಿಲ್ಲವೆಂಬ ಭಾವನೆ ಇದೆ. ಆದರೆ ಎಲ್ಲರೂ ಆ ರೀತಿ ಇರುವುದಿಲ್ಲವೆಂಬುದಕ್ಕೆ ಆನೇಕ ಉದಾಹರಣೆಗಳಿವೆ.
ಮಹಾರಾಷ್ಟ್ರದ ರೈತರು ಸಂಕಷ್ಟಕ್ಕೊಳಗಾಗಿದ್ದ ವೇಳೆ ನಟ ನಾನಾ ಪಾಟೇಕರ್, ಅವರುಗಳ ನೆರವಿಗೆ ಧಾವಿಸಿದ್ದು, ಈಗಲೂ ತಮ್ಮ ಸಾಮಾಜಿಕ ಕಾರ್ಯ ಮುಂದುವರೆಸಿದ್ದಾರೆ. ಅದೇ ರೀತಿ ಮಾಜಿ ಸೂಪರ್ ಮಾಡೆಲ್ ಹಾಗೂ ಬಾಲಿವುಡ್ ನಟ ಮಿಲಿಂದ್ ಸೋಮನ್, ಓಟದ ಮಹತ್ವದ ಕುರಿತು ಅರಿವು ಮೂಡಿಸಲು ಅಹ್ಮದಾಬಾದ್ ನಿಂದ ಮುಂಬೈವರೆಗೆ ಬರಿಗಾಲಿನಲ್ಲಿ ಓಟ ನಡೆಸಿದ್ದಾರೆ.
ಜುಲೈ 26 ರಂದು ಅಹ್ಮದಾಬಾದ್ ನಿಂದ ತಮ್ಮ ಓಟ ಆರಂಭಿಸಿರುವ 50 ವರ್ಷದ ಈ ನಟ, ಒಟ್ಟು 527 ಕಿ.ಮೀ. ಕ್ರಮಿಸಲಿದ್ದಾರೆ. ಮೊದಲ ದಿನವೇ ಅವರು 67 ಕಿ.ಮೀ. ಕ್ರಮಿಸಿದ್ದು, ಎರಡನೇ ದಿನ 62 ಕಿ.ಮೀ. ಓಟ ಪೂರೈಸಿದ್ದಾರೆ. ಆಗಸ್ಟ್ 7 ರಂದು ಮಿಲಿಂದ್ ಸೋಮನ್, ಮುಂಬೈ ತಲುಪುವ ನಿರೀಕ್ಷೆಯಿದೆ. ತಮ್ಮ ಈ ಓಟದ ವಿಡಿಯೋವನ್ನು ಮಿಲಿಂದ್ ಸೋಮನ್, ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದು, ಅಸಂಖ್ಯಾತ ಮಂದಿ ಲೈಕ್ ಮಾಡಿದ್ದಾರೆ.