ಮೈಸೂರು: ಸ್ನೇಹಿತರೊಂದಿಗೆ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್, ಅನಾರೋಗ್ಯದಿಂದ ಬ್ರಸೆಲ್ಸ್ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೃತದೇಹವನ್ನು ಭಾನುವಾರ ಬೆಂಗಳೂರಿಗೆ ತರಲಿದ್ದು, ನಂತರ ಮೈಸೂರಿಗೆ ಕೊಂಡೊಯ್ಯಲಾಗುವುದು. ಮೈಸೂರಿನ ಸಿದ್ಧರಾಮನ ಹುಂಡಿಯ ಸಮೀಪದ ಟಿ.ಕಾಟೂರು ಫಾರ್ಮ್ ಹೌಸ್ ನಲ್ಲಿ ರಾಕೇಶ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ. ಮಾಧ್ಯಮಗಳಲ್ಲಿ ರಾಕೇಶ್ ನಿಧನದ ಸುದ್ದಿ ತಿಳಿಯುತ್ತಲೇ, ಮೈಸೂರಿನಲ್ಲಿರುವ ಸಿದ್ಧರಾಮಯ್ಯನವರ ನಿವಾಸದ ಬಳಿ ಬಂಧು ಬಾಂಧವರು ನೆರೆದಿದ್ದು, ಎಲ್ಲರಲ್ಲೂ ದುಃಖ ಮಡುಗಟ್ಟಿದೆ. ಸಿದ್ಧರಾಮನ ಹುಂಡಿಯಲ್ಲೂ ಬಂಧುಗಳು, ಸ್ನೇಹಿತರು ನೆರೆದಿದ್ದು, ದುಃಖಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಅವರ ಪತ್ನಿ ಹಾಗೂ ಕುಟುಂಬದವರೆಲ್ಲಾ ಬೆಲ್ಜಿಯಂಗೆ ತೆರಳಿದ್ದಾರೆ. ಇದರಿಂದಾಗಿ ಸಿದ್ಧರಾಮಯ್ಯ ಬೆಂಬಲಿಗರು, ಬಂಧುಗಳು ಹಾಗೂ ಸ್ನೇಹಿತರು ಮನೆಯ ಸಮೀಪ ನೆರೆದಿದ್ದಾರೆ. ಬೆಂಗಳೂರಿಗೆ ನಾಳೆ ಮೃತದೇಹ ಬರಲಿದ್ದು, ಸೋಮವಾರ ಮೈಸೂರಿಗೆ ತರಲಾಗುವುದು ಎನ್ನಲಾಗಿದೆ.