ಕುಡಿದ ಅಮಲಿನಲ್ಲಿ ಗ್ರಾಮಸ್ಥರ ಜೊತೆ ಅನುಚಿತವಾಗಿ ವರ್ತಿಸಿದ್ದ ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಯಶವಂತ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ರಕ್ಷಣಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ಕಂಠಪೂರ್ತಿ ಕುಡಿದಿದ್ದ ಸಬ್ ಇನ್ಸ್ ಪೆಕ್ಟರ್ ಯಶವಂತ್, ನಿನ್ನೆ ಸಂಜೆ ಸಿಬ್ಬಂದಿಗಳ ಜೊತೆ ರೌಂಡ್ಸ್ ಹೋಗಿದ್ದಾರೆ. ಹರಿರಾಯನಹಳ್ಳಿ ಬಳಿಯ ಅಂಗಡಿಯೊಂದಕ್ಕೆ ಹೋದ ಅವರುಗಳು, ಮದ್ಯ ಮಾರಾಟ ಮಾಡುತ್ತಿದ್ದೀಯಾ ಎಂದು ಆರೋಪಿಸಿದ್ದಲ್ಲದೇ ಪರಿಶೀಲನೆಗೆ ಮುಂದಾಗಿದ್ದಾರೆ.
ಈ ವೇಳೆ ಅಲ್ಲಿದ್ದ ಕೆಲ ಯುವಕರು ಕುಡಿದು ಬಂದು ಈ ರೀತಿ ದೌರ್ಜನ್ಯ ಮಾಡುವುದು ಸರಿಯಲ್ಲವೆಂದು ಸಬ್ ಇನ್ಸ್ ಪೆಕ್ಟರ್ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಆಗ ಸಮೀಪದ ಮನೆಯೊಂದಕ್ಕೆ ಹೋಗಿ ಸಬ್ ಇನ್ಸ್ ಪೆಕ್ಟರ್ ಯಶವಂತ್ ಬಚ್ಚಿಟ್ಟುಕೊಂಡಿದ್ದು, ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸರ್ಕಲ್ ಇನ್ಸ್ ಪೆಕ್ಟರ್, ಅವರನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ. ಯಶವಂತ್ ಅವರ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದ್ದು, ಗ್ರಾಮಸ್ಥರ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಅವರನ್ನು ಸುಧೀರ್ ಕುಮಾರ್ ರೆಡ್ಡಿ ಅಮಾನತು ಮಾಡಿ ಆದೇಶಿಸಿದ್ದಾರೆ.