ಗ್ರಾಹಕರ ಹಾಟ್ ಫೇವರಿಟ್ ಎನಿಸಿಕೊಂಡಿರುವ ಆ್ಯಪಲ್ ಕಂಪನಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಬರೋಬ್ಬರಿ 100 ಕೋಟಿ ಐಫೋನ್ ಗಳನ್ನು ಮಾರಾಟ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಇದರೊಂದಿಗೆ ಸ್ಮಾರ್ಟ್ ಫೋನ್ ಮಾರುಕಟ್ಟೆಯ ದಿಗ್ಗಜನಾಗಿ ಹೊರಹೊಮ್ಮಿದೆ.
ಕ್ಯಾಲಿಫೋರ್ನಿಯಾದಲ್ಲಿರುವ ಕಂಪನಿಯ ಮುಖ್ಯ ಕಚೇರಿಯಲ್ಲಿ ಸಿಬ್ಬಂದಿ ಉದ್ದೇಶಿಸಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಟಿಮ್ ಕುಕ್, ಆ್ಯಪಲ್ ನ ಹೊಸ ದಾಖಲೆಯನ್ನು ಪ್ರಕಟಿಸಿದ್ದಾರೆ. ಇತಿಹಾಸದ ಯಶಸ್ವಿ ಉತ್ಪನ್ನಗಳಲ್ಲಿ ಐಫೋನ್ ಕೂಡ ಒಂದು. ಪ್ರಪಂಚವನ್ನೇ ಬದಲಾಯಿಸುವ ಶಕ್ತಿ ಐಫೋನ್ ಗಿದೆ ಅನ್ನೋದು ಟಿಮ್ ಕುಕ್ ಅವರ ಹೆಮ್ಮೆಯ ನುಡಿ. ಅಷ್ಟೇ ಅಲ್ಲ ಐಫೋನ್ ನಮ್ಮ ದಿನನಿತ್ಯದ ಬದುಕಿನ ಭಾಗವಾಗಿದೆ. ಅತ್ಯುತ್ತಮ ಉತ್ಪನ್ನ ತಾನಾಗಿಯೇ ಗುರುತಿಸಿಕೊಳ್ಳುತ್ತೇ ಅನ್ನೋದಕ್ಕೆ ಇದೇ ಸಾಕ್ಷಿ ಎನ್ನುತ್ತಾರೆ ಅವರು.
ಕಳೆದ ತ್ರೈಮಾಸಿಕದಲ್ಲಿ ಐಫೋನ್ ಮಾರಾಟ ಕುಸಿತ ಕಂಡಿದೆ ಅನ್ನೋ ಸುದ್ದಿಯಿತ್ತು. ಇದರ ಬೆನ್ನಲ್ಲೇ 100 ಕೋಟಿ ಐಫೋನ್ ಗಳು ಈಗಾಗ್ಲೇ ಮಾರಾಟವಾಗಿರೋದಾಗಿ ಆ್ಯಪಲ್ ಕಂಪನಿ ಪ್ರಕಟಿಸಿದೆ. ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪೈಪೋಟಿಯಿಂದಾಗಿ ಆ್ಯಪಲ್ ಗೆ ಸಾಲು ಸಾಲು ಸವಾಲುಗಳು ಎದುರಾಗಿದ್ವು. ನಿರಂತರ ಬೆಳವಣಿಗೆ ಸಾಧ್ಯವಿಲ್ಲವೇನೋ ಎಂಬ ಆತಂಕವೂ ಇತ್ತು. ಹಾಗಾಗಿ ಉತ್ಪನ್ನ ಮಾದರಿಯಲ್ಲಿ ಬದಲಾವಣೆಯ ಜೊತೆಗೆ ಸ್ಥಿರ ಆದಾಯ ಮೂಲದ ಸೇವೆಗಳಲ್ಲಿ ತೊಡಗಿಕೊಳ್ಳಲು ಸಂಸ್ಥೆ ಚಿಂತನೆ ನಡೆಸಿತ್ತು. ಬಳಕೆದಾರರನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಳ್ಳಲು ಆ್ಯಪಲ್ ಸಂಸ್ಥೆ ಸಾಕಷ್ಟು ಕಸರತ್ತು ಮಾಡಿದೆ. ಆ್ಯಪಲ್ ವಾಚ್ ಕೂಡ ಇವುಗಳಲ್ಲೊಂದು. ಅದೇನೇ ಆದ್ರೂ ಐಫೋನ್ ಸದ್ಯ ಸ್ಮಾರ್ಟ್ ಫೋನ್ ಮಾರುಕಟ್ಟೆಯ ನಂಬರ್ 1 ಫೋನ್ ಅನ್ನೋದ್ರಲ್ಲಿ ಡೌಟೇ ಇಲ್ಲ. 100 ಕೋಟಿ ಐಫೋನ್ ಗಳನ್ನು ಮಾರಾಟ ಮಾಡುವ ಮೂಲಕ ಆ್ಯಪಲ್ ಮತ್ತೊಮ್ಮೆ ಗ್ರಾಹಕರ ಮನಗೆದ್ದಿದೆ.