ಕೊಲ್ಲಂ: ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರದ ಕತೆಯನ್ನು ನೆನಪಿಸುವಂತಹ ಘಟನೆಯೊಂದು ಕೇರಳದ ಕೊಲ್ಲಂನಲ್ಲಿ ನಡೆದಿದೆ. ತನ್ನ ತಾಯಿ ಹಿಂದೆ ಪ್ರೀತಿಸಿದ್ದ ಪ್ರಿಯತಮನೊಂದಿಗೆ ಸೇರಿಸುವ ಮೂಲಕ ಪುತ್ರಿಯೊಬ್ಬಳು ಸುದ್ದಿಯಾಗಿದ್ದಾಳೆ.
ಬರೋಬ್ಬರಿ 30 ವರ್ಷಗಳ ನಂತರ ತಾನು ಪ್ರೀತಿಸಿದವನನ್ನು ಸೇರಲು ಮಹಿಳೆಗೆ ಮಗಳೇ ನೆರವಾಗಿದ್ದಾಳೆ. ಸಿ.ಪಿ.ಎಂ. ಮುಖಂಡರಾಗಿರುವ ಜಿ. ವಿಕ್ರಮನ್ 32 ವರ್ಷಗಳ ಹಿಂದೆ ಅನಿತಾ ಎಂಬುವವರನ್ನು ಪ್ರೀತಿಸಿದ್ದರು. ಅನಿತಾ ಅವರ ತಂದೆ ಇವರ ಪ್ರೀತಿಗೆ ಒಪ್ಪದ ಕಾರಣ, ಇವರು ಒಂದಾಗಬೇಕೆಂಬ ಆಸೆ ಕೈಗೂಡಿರಲಿಲ್ಲ. ಅನಿತಾ, ಮನೆಯವರ ಒತ್ತಾಯದಿಂದ ಬೇರೆಯವನನ್ನು ಮದುವೆಯಾದರು. ಆದರೆ, ಇಬ್ಬರು ಹೆಣ್ಣುಮಕ್ಕಳು ಜನಿಸಿದ ನಂತರದಲ್ಲಿ ಮದ್ಯ ವ್ಯಸನಿಯಾಗಿದ್ದ ಪತಿ ಸಾವನ್ನಪ್ಪಿದ್ದಾನೆ.
ಅನಿತಾ ಮಕ್ಕಳಾದ ಅತಿರಾ ಮತ್ತು ಅಶಿಲಿ ಅವರು ಬೆಳೆದು ದೊಡ್ಡವರಾಗಿದ್ದಾರೆ. ಅಮ್ಮನ ಹಿಂದಿನ ಲವ್ ಸ್ಟೋರಿ ಬಗ್ಗೆ ತಿಳಿದುಕೊಂಡಿದ್ದ ಅತಿರಾ, ವಿಕ್ರಮನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇಷ್ಟು ವರ್ಷಗಳ ಕಾಲ ಮದುವೆಯಾಗದೇ ಅನಿತಾ ನೆನಪಿನಲ್ಲೇ ಉಳಿದಿದ್ದ ವಿಕ್ರಮನ್, ಈಗ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾಯಿಯನ್ನು ಪ್ರಿಯಕರನೊಂದಿಗೆ ಸೇರಿಸಿದ ಮಕ್ಕಳು ಖುಷಿಪಟ್ಟಿದ್ದಾರೆ.