ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಕಳೆದ ಭಾನುವಾರದಿಂದ ನಡೆಸುತ್ತಿದ್ದ ಮುಷ್ಕರವನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಅಂತ್ಯಗೊಳಿಸಿದ್ದು, ಬಸ್ ಸಂಚಾರ ಆರಂಭವಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್, ಯಶವಂತಪುರ, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಬಸ್ ಸಂಚಾರ ಆರಂಭಿಸಿವೆ. ಅದೇ ರೀತಿ ರಾಜ್ಯದ ವಿವಿಧ ಕಡೆಗಳಿಂದ ಬಸ್ ಸಂಚಾರ ಆರಂಭವಾಗಿದ್ದು, 3 ದಿನಗಳಿಂದ ಹೈರಾಣಾಗಿದ್ದ ಪ್ರಯಾಣಿಕರು ನಿಟ್ಟುಸಿರುಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೆ.ಎಸ್.ಆರ್.ಟಿ.ಸಿ. ಕಾರ್ಮಿಕ ಸಂಘಟನೆಗಳು ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಸರ್ಕಾರ, ಸಾರಿಗೆ ನೌಕರರ ವೇತನವನ್ನು ಶೇ.12.5ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಿದೆ.
ಇದರೊಂದಿಗೆ ನೌಕರರು ಮಂಡಿಸಿದ್ದ ವಿವಿಧ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದು, ಇಂದು ಸಂಜೆಯಿಂದಲೇ ಬಸ್ ಸಂಚಾರ ಆರಂಭವಾಗಲಿದೆ ಎಂದು ಕಾರ್ಮಿಕ ಸಂಘಟನೆಯ ಮುಖಂಡ ಅನಂತ ಸುಬ್ಬರಾವ್ ತಿಳಿಸಿದ್ದಾರೆ.