ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಕೈಗೊಂಡಿದ್ದಾರೆ. ಈ ನಡುವೆ ಸರ್ಕಾರ, ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭಿಸಿದೆ.
ಕೆಲವು ಕಡೆಗಳಲ್ಲಿ ಬಸ್ ಸಂಚಾರ ಆರಂಭವಾಗಿದ್ದರೂ, ಕೆಲವೆಡೆ ಮುಷ್ಕರ ನಿರತ ನೌಕರರು, ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದಾಗಿ ಪ್ರಯಾಣಿಕರು ಮತ್ತು ಮುಷ್ಕರ ನಿರತ ನೌಕರರ ನಡುವೆ ಕೆಲವು ಕಡೆಗಳಲ್ಲಿ ಮಾತಿನ ಚಕಮಕಿ ನಡೆದಿದೆ. ಮುಷ್ಕರ ಸ್ಥಗಿತಕ್ಕೆ ಸರ್ಕಾರ ಮನವಿ ಮಾಡಿದ್ದರೂ ನೌಕರರು ಮಣಿದಿಲ್ಲ. ಈ ನಡುವೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ರಾಜ್ಯದ ಅನೇಕ ಕಡೆಗಳಲ್ಲಿ ಬಸ್ ಸಂಚಾರ ಆರಂಭಿಸಲಾಗಿದೆ. ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತಂತೆ ಚರ್ಚೆ ನಡೆಸಲಾಗಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಮುಷ್ಕರ ನಿರತ ಸಾರಿಗೆ ಸಂಸ್ಥೆ ನೌಕರರೊಂದಿಗೆ ಮಾತುಕತೆ ನಡೆಸಿದ್ದೇವೆ. ಮುಷ್ಕರ ಕೈಬಿಡುವಂತೆ ಮನವಿ ಮಾಡಿದ್ದು, ಕೊನೆಯದಾಗಿ ಎಸ್ಮಾ ಅಸ್ತ್ರ ಬಳಸುತ್ತೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಎಸ್ಮಾ ಕಾಯ್ದೆ ಜಾರಿ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ನೌಕರರ ಸಂಘಟನೆಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇವೆ. ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಆದರೆ, ಅವರು ಕೇಳಿದಷ್ಟು ವೇತನ ಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆನ್ನಲಾಗಿದೆ.
ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚಿನ ವೇತನ ನೀಡಲಾಗುತ್ತಿದೆ. ಅಲ್ಲದೇ, ಮುಷ್ಕರದ ಹಿನ್ನಲೆಯಲ್ಲಿ ನಾಳೆಯೂ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ. ಆದರೆ, ಆಯಾ ಜಿಲ್ಲಾಧಿಕಾರಿಗಳು ಈ ಕುರಿತಂತೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ನಾಳೆಯೂ ರಜೆ ಘೋಷಿಸಿದ್ದರೂ, ಆಯಾ ಜಿಲ್ಲಾಧಿಕಾರಿಗಳು ಪರ್ಯಾಯ ವ್ಯವಸ್ಥೆ ಮೂಲಕ ಶಾಲೆ, ಕಾಲೇಜು ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.