ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿರುವ ಹಿನ್ನಲೆಯಲ್ಲಿ ಪರ್ಯಾಯ ವ್ಯವಸ್ಥೆಗೆ ಮುಂದಾಗಿರುವ ಸರ್ಕಾರ, 15 ಸಾವಿರ ಪ್ರೊಬೆಷನರಿ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗುವಂತೆ ಖಡಕ್ ಸೂಚನೆ ನೀಡಿದೆ.
ಪ್ರೊಬೆಷನರಿ ಡ್ರೈವರ್ಸ್ ಹಾಗೂ ಕಂಡಕ್ಟರ್ ಗಳನ್ನು ಬಳಸಿಕೊಂಡು ಬಸ್ ಸಂಚಾರ ಆರಂಭಿಸಬೇಕೆಂಬ ಚಿಂತನೆಯನ್ನು ಸರ್ಕಾರ ಹೊಂದಿದ್ದು, ಕೂಡಲೇ ಕೆಲಸಕ್ಕೆ ಹಾಜರಾಗದಿದ್ದರೆ ವಜಾ ಮಾಡುವುದಾಗಿ ಪ್ರೊಬೆಷನರಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ.
ವೇತನವನ್ನು ಶೇ.10 ರಷ್ಟು ಏರಿಕೆ ಮಾಡಲು ಮಾತ್ರ ಸರ್ಕಾರ ಸಿದ್ದವಾಗಿದ್ದು, ಇದನ್ನು ಒಪ್ಪಿಕೊಳ್ಳಲು ಸಾರಿಗೆ ನೌಕರರ ಸಂಘದ ಮುಖಂಡರು ಸಿದ್ದರಿಲ್ಲ. ಹಾಗಾಗಿ ಮುಷ್ಕರ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಸರ್ಕಾರ ಮಾತುಕತೆಗೆ ಸಿದ್ದವಿದ್ದು, ಮೊದಲು ಮುಷ್ಕರ ಕೊನೆಗೊಳಿಸಿ ಎಂದು ಹೇಳುತ್ತಿದ್ದರೆ ನೌಕರರು ಮಾತ್ರ, ಬೇಡಿಕೆ ಈಡೇರುವವರೆಗೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಹೀಗಾಗಿ ಈ ಹಗ್ಗ ಜಗ್ಗಾಟದ ಮಧ್ಯೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.