ಚಂಡೀಗಢ: ರಕ್ಷಕರೇ ಕೆಲವೊಮ್ಮೆ ಭಕ್ಷಕರಾದ ಅನೇಕ ಘಟನೆಗಳು ನಡೆದಿವೆ. ಹೀಗೆ ಬಸ್ ನಲ್ಲಿ 6 ವರ್ಷದ ಬಾಲಕಿಗೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಲೈಂಗಿಕ ಕಿರುಕುಳ ನೀಡಿದ ಘಟನೆ ಚಂಡೀಗಢದಲ್ಲಿ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಿ.ಎಸ್.ಐ.,ರಾಮ್ ಲಾಲ್ ಇಂತಹ ಕೃತ್ಯ ಎಸಗಿದ ಆರೋಪಿ. ರಾಮ್ ಲಾಲ್ ಬಸ್ ನಲ್ಲಿ ಪ್ರಯಾಣಿಕರೊಬ್ಬರ 6 ವರ್ಷದ ಬಾಲಕಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಹಿನ್ನಲೆಯಲ್ಲಿ ರಾಮ್ ಲಾಲ್ ನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಮ್ ಲಾಲ್ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಬಾಲಕಿಯನ್ನು ಕೂರಿಸಿಕೊಂಡು ಅನುಚಿತವಾಗಿ ವರ್ತಿಸಿದ್ದನ್ನು ಕಂಡ ಸಹ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ನಂತರ ಸೀದಾ ಪೊಲೀಸ್ ಸ್ಟೇಷನ್ ಗೆ ಬಸ್ ತೆಗೆದುಕೊಂಡು ಹೋಗಿದ್ದು, ರಾಮ್ ಲಾಲ್ ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಚಾರಣೆ ವೇಳೆ ಆತ ಪಿ.ಎಸ್.ಐ. ಎಂಬುದು ಗೊತ್ತಾಗಿದ್ದು, ಪ್ರಯಾಣಿಕರು ಕಾಮುಕ ಪಿ.ಎಸ್.ಐ. ವರ್ತನೆಗೆ ಛೀಮಾರಿ ಹಾಕಿದ್ದಾರೆ.