ಚೆನ್ನೈನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಬ್ಬರು ನಾಯಿಯೊಂದನ್ನು ಕಟ್ಟಡದ ಮೇಲಿನಿಂದ ಕೆಳಗೆಸೆದಿದ್ದು, ಬಾಲಕರ ಗುಂಪೊಂದು ನಾಯಿ ಮರಿಗಳನ್ನು ಜೀವಂತ ಸುಟ್ಟ ಘಟನೆಗಳ ಬಳಿಕ ಈಗ ಮತ್ತೊಂದು ಕ್ರೂರ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿದೆ.
ಹೈದರಾಬಾದಿನಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಎರಡು ಬೀದಿ ನಾಯಿಗಳನ್ನು ಗುರಿಯಿಟ್ಟು ಏರ್ ಗನ್ ನಿಂದ ಗುಂಡು ಹಾರಿಸಿದ್ದು, ಒಂದು ನಾಯಿ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾದರೆ ಮತ್ತೊಂದಕ್ಕೆ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದೆ.
ಈ ದೃಶ್ಯವನ್ನು ಸೆರೆ ಹಿಡಿದವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವ್ಯಕ್ತಿಯ ಕ್ರೂರ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಾಣಿ ದಯಾಪರ ಸಂಘಟನೆಯ ಸದಸ್ಯರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ವಿಡಿಯೋ ದೃಶ್ಯಾವಳಿ ಆಧರಿಸಿ ಆರೋಪಿಯ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.