ವ್ಯವಹಾರ ನಿಮಿತ್ತ ವಿಶಾಖಪಟ್ಟಣಕ್ಕೆ ತನ್ನ ಮಕ್ಕಳು ಹಾಗೂ ನೆರೆಹೊರೆಯವರೊಂದಿಗೆ ಬಂದಿದ್ದ ಮಹಿಳೆಯೊಬ್ಬಳು ತಾನು ಹಣ ಕಳೆದುಕೊಂಡಿದ್ದ ಹಣ ಪಡೆಯಲು ಪೊಲೀಸರನ್ನೇ ಯಾಮಾರಿಸಿದ ಘಟನೆ ನಡೆದಿದೆ.
ಗೀತಾ ಎಂಬ ದೆಹಲಿ ಮೂಲದ ಈ ಮಹಿಳೆ, ಈ ಹಿಂದೆಯೂ ಹಲವು ಬಾರಿ ವಿಶಾಖಪಟ್ಟಣಕ್ಕೆ ಬಂದಿದ್ದು, ಜುಲೈ 14 ರಂದು ಲಾಡ್ಜ್ ನಲ್ಲಿ ತಂಗಿದ್ದರು. ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಈ ಮೊದಲೇ ಪರಿಚಿತನಾಗಿದ್ದ ಶ್ರೀಕಾಂತ್ ಎಂಬಾತನ ಕಾರು ಬಾಡಿಗೆಗೆ ಪಡೆದಿದ್ದು, ಊಟಕ್ಕೆಂದು ಹೋಟೆಲ್ ಗೆ ಹೋದ ವೇಳೆ 18,000 ರೂ. ಹಣವಿದ್ದ ಬ್ಯಾಗನ್ನು ಮರೆತು ಕಾರಿನಲ್ಲಿ ಬಿಟ್ಟಿದ್ದರು. ಇದೇ ಸಂದರ್ಭ ಸಾಧಿಸಿದ ಚಾಲಕ ಶ್ರೀಕಾಂತ್, ಹಣದ ಸಮೇತ ಪರಾರಿಯಾಗಿದ್ದ.
ಹಣ ಕಳೆದುಕೊಂಡು ಕಂಗಾಲಾದ ಗೀತಾ, ಪೊಲೀಸರಿಗೆ ದೂರು ನೀಡಿದ ವೇಳೆ, ಚಾಲಕ ಶ್ರೀಕಾಂತ್, ನನ್ನ ಮಗನನ್ನು ಅಪಹರಿಸಿಕೊಂಡು ಹಣದ ಸಮೇತ ಪರಾರಿಯಾಗಿದ್ದಾನೆಂದು ಹೇಳಿದ್ದಳು. ಇದರಿಂದ ಆತಂಕಗೊಂಡ ಪೊಲೀಸರು, ಮಗುವನ್ನು ಸುರಕ್ಷಿತವಾಗಿ ಪತ್ತೆ ಹಚ್ಚಲು ತುರ್ತು ಕ್ರಮ ಕೈಗೊಂಡಿದ್ದರು.
ಚಾಲಕ ಪತ್ತೆಯಾದಾಗ ಬಯಲಾದ ಸಂಗತಿಯೆಂದರೆ ಅಸಲಿಗೆ ಗೀತಾ, ವಿಶಾಖಪಟ್ಟಣಕ್ಕೆ ತನ್ನ ಮಗನನ್ನು ಕರೆದುಕೊಂಡು ಬಂದಿರಲೇ ಇಲ್ಲ. ಈ ರೀತಿ ದೂರು ಕೊಟ್ಟರೆ ಪೊಲೀಸರು ತನ್ನ ಹಣವನ್ನು ಬೇಗ ಹುಡುಕಿಸಿಕೊಡುತ್ತಾರೆಂದು ಗೀತಾ ಸುಳ್ಳು ಹೇಳಿಕೆ ನೀಡಿದ್ದಳು. ಇದೀಗ ಪ್ರಕರಣವನ್ನು ಬಗೆಹರಿಸಿರುವ ಪೊಲೀಸರು ಸುಳ್ಳು ದೂರು ನೀಡಿದ್ದ ಗೀತಾಳ ವಿರುದ್ದವೂ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.