ಬೈಕ್ ನಲ್ಲಿ ಬರುತ್ತಿದ್ದ ಯುವಕನೊಬ್ಬನಿಗೆ ಗಾಳಿಪಟದ ದಾರ ಉರುಳಾಗಿ ಪರಿಣಮಿಸಿದೆ. ದಾರ ಯುವಕನ ಕತ್ತಿಗೆ ಸುತ್ತಿಕೊಂಡ ಪರಿಣಾಮ ತೀವ್ರವಾಗಿ ಗಾಯಗೊಂಡ ಆತ ಸಾವನ್ನಪ್ಪಿದ್ದಾನೆ.
ನವದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಮುಕೇಶ್ ಶರ್ಮಾ ಎಂಬ ಯುವಕ, ಕಾರ್ಯ ನಿಮಿತ್ತ ಲಾಲ್ಕೂನ್ ಏರಿಯಾಕ್ಕೆ ತೆರಳಿದ್ದು, ವಾಪಾಸ್ ಬರುವ ವೇಳೆ ಠಾಕೂರ್ ದ್ವಾರ ಫ್ಲೈ ಓವರ್ ಮೇಲೆ ಯಾರೋ ಹಾರಿ ಬಿಟ್ಟಿದ್ದ ಗಾಳಿಪಟದ ದಾರ ಹಠಾತ್ತಾಗಿ ಸುತ್ತಿಕೊಂಡಿದೆ. ಇದರಿಂದಾಗಿ ಯುವಕನ ಕತ್ತು ಕೊಯ್ದಿದ್ದು, ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಜಿ.ಟಿ. ರೋಡ್ ಪೊಲೀಸರು ಗಾಳಿಪಟ ಹಾರಿ ಬಿಟ್ಟ ಅಪರಿಚಿತ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡು ಆತನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಮುಕೇಶ್ ಶರ್ಮಾನ ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೋಷಕರ ವಶಕ್ಕೆ ನೀಡಲಾಗಿದೆ.