ಮೈಸೂರು: ಆಷಾಢ ಮಾಸದ ಮೊದಲ ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ ದರ್ಶನಕ್ಕೆ ಜನಸಾಗರವೇ ನೆರೆದಿತ್ತು. ಆಷಾಢ ಮಾಸದಲ್ಲಿ ಶಕ್ತಿಯನ್ನು ಆರಾಧನೆ ಮಾಡುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆ ಇದ್ದು, ಹೆಚ್ಚಿನ ಭಕ್ತರು ಚಾಮುಂಡೇಶ್ವರಿ ದರ್ಶನ ಪಡೆಯುತ್ತಾರೆ.
ಮೊದಲ ಶುಕ್ರವಾರ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಯಾವುದೇ ನೂಕುನುಗ್ಗಲು ಉಂಟಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ, ಬಂದ ಭಕ್ತರಿಗೆಲ್ಲಾ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಷಾಢ ಮಾಸದ ಮೊದಲ ಶುಕ್ರವಾರದ ನಿಮಿತ್ತ ದೇವತೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಗರ್ಭಗುಡಿಯನ್ನು ದ್ರಾಕ್ಷಿಗಳಿಂದ ಸಿಂಗರಿಸಲಾಗಿತ್ತು. ಅಲ್ಲದೇ, ವಿವಿಧ ಪೂಜೆ, ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು.
ಸ್ಯಾಂಡಲ್ ವುಡ್ ಸ್ಟಾರ್ ದರ್ಶನ್ ಅವರು ಚಾಮುಂಡೇಶ್ವರಿ ಸನ್ನಿಧಿಗೆ ಆಗಮಿಸಿ, ಪೂಜೆ ಸಲ್ಲಿಸಿದರು. ಅಲ್ಲದೇ ಸಚಿವರು, ಶಾಸಕರು ಗಣ್ಯರು ಕೂಡ ಆಗಮಿಸಿದ್ದರು. ಬಂದ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿತ್ತು. ಆಷಾಢಮಾಸದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದ್ದು, ಮುಂದಿನ ವಾರಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಲಿದೆ ಎನ್ನಲಾಗಿದೆ.