ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ, ಮೊದಲ ಬಜೆಟ್ ಅನ್ನು ಮಂಡಿಸಲಾಗಿದ್ದು, ದೇಶದಲ್ಲಿ ಇದೇ ಮೊದಲ ಬಾರಿಗೆ ಫ್ಯಾಟ್ ಟ್ಯಾಕ್ಸ್(ಕೊಬ್ಬು ತೆರಿಗೆ) ವಿಧಿಸಲಾಗಿದೆ. ಇನ್ನುಮುಂದೆ ಕೊಬ್ಬಿಗೂ ತೆರಿಗೆ ಕಟ್ಟಬೇಕಿದೆ.
ಪಿಝಾ, ಬರ್ಗರ್, ಪಾಸ್ತಾ, ಸ್ಯಾಂಡ್ ವಿಚ್, ಬ್ರೆಡ್ ಫಿಲಿಂಗ್ ಡಫ್ ನಟ್ಸ್ ಮೊದಲಾದವುಗಳನ್ನು ಇಷ್ಟಪಡುವ ಜಂಕ್ ಫುಡ್ ಪ್ರಿಯರು, ಇನ್ನುಮುಂದೆ ಜೇಬಿಗೆ ಕತ್ತರಿ ಹಾಕಿಸಿಕೊಳ್ಳಲು ರೆಡಿ ಇರಬೇಕು. ಸಿ.ಪಿ.ಎಂ. ನೇತೃತ್ವದ ಎಲ್.ಡಿ.ಎಫ್.ಸರ್ಕಾರದ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು, ಮೊದಲ ಬಜೆಟ್ ಮಂಡಿಸಿದ್ದು, ಜಂಕ್ ಫುಡ್ ಮಾರಾಟ ಮಾಡುವ ಬ್ರಾಂಡೆಡ್ ರೆಸ್ಟೋರೆಂಟ್ ಗಳ ಮೇಲೆ ಶೇ.14.5ರಷ್ಟು ಫ್ಯಾಟ್ ಟ್ಯಾಕ್ಸ್ ವಿಧಿಸಲಾಗುವುದೆಂದು ತಿಳಿಸಿದ್ದಾರೆ.
ಡೆನ್ಮಾರ್ಕ್ ಮತ್ತು ಹಂಗೇರಿಯಲ್ಲಿ ಈ ತೆರಿಗೆ ವಿಧಿಸಲಾಗುತ್ತಿದೆ. ಭಾರತದಲ್ಲಿ ಮೊದಲಬಾರಿಗೆ ಕೇರಳ ಸರ್ಕಾರ ಫ್ಯಾಟ್ ಟ್ಯಾಕ್ಸ್ ಜಾರಿಗೆ ಮುಂದಾಗಿದ್ದು, ಇದರಿಂದ 10 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಇನ್ಮುಂದೆ ಜಂಕ್ ಫುಡ್ ತಿನ್ನುವವರು ಹೆಚ್ಚು ಹಣ ತೆರಬೇಕಿದೆ.