ಗುರುವಾರದಂದು ಮಡಿಕೇರಿಯ ವಸತಿ ಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿ.ವೈ.ಎಸ್.ಪಿ. ಗಣಪತಿ, ಆತ್ಮಹತ್ಯೆಗೂ ಮುನ್ನ ತಮ್ಮ ವಿರುದ್ದ ಮಾಡಿರುವ ಆರೋಪವನ್ನು ನಿರಾಕರಿಸಿರುವ ಸಚಿವ ಕೆ.ಜೆ. ಜಾರ್ಜ್ ತಾವು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಒಮ್ಮೆ ಮಾತ್ರ ಅವರು ತಮ್ಮನ್ನು ಭೇಟಿಯಾಗಿದ್ದರೆಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಣಪತಿಯವರ ಆತ್ಮಹತ್ಯೆ ತಮಗೂ ನೋವುಂಟು ಮಾಡಿದೆ. ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸಿದರಲ್ಲದೇ ತಾವು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳ ಮೇಲೆ ಒತ್ತಡ ಹೇರಿರಲಿಲ್ಲವೆಂದು ಹೇಳಿದ್ದಾರೆ.
ತಾವು ಗೃಹ ಸಚಿವರಾಗಿದ್ದಾಗ ಚರ್ಚ್ ಮೇಲಿನ ದಾಳಿ ನಡೆದಿದ್ದು, ಗಣಪತಿಯವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದರು. ಆಗ ತಮ್ಮನ್ನು ಭೇಟಿ ಮಾಡಿದ್ದ ಗಣಪತಿ, ಪ್ರಕರಣದಲ್ಲಿ ತಮ್ಮದು ಯಾವುದೇ ತಪ್ಪಿಲ್ಲವೆಂದು ಹೇಳಿದ್ದರು. ಅದಕ್ಕೆ ತನಿಖೆ ಸಂದರ್ಭದಲ್ಲಿ ತಾವು ಮಧ್ಯ ಪ್ರವೇಶಿಸುವುದಿಲ್ಲವೆಂದು ಹೇಳಿದ್ದಾಗಿ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.