ಹೈದರಾಬಾದ್: ಕುಡಿತದ ಚಟಕ್ಕೆ ದಾಸನಾಗಿದ್ದ ವ್ಯಕ್ತಿಯೊಬ್ಬ ಹಣಕ್ಕಾಗಿ ಹಸುಗೂಸನ್ನೇ ಮಾರಾಟ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಕರೀಂನಗರ ಜಿಲ್ಲೆಯ ಜಯರಾಜ್ ಎಂಬಾತ ತನ್ನದೇ ಮಗುವನ್ನು ಮಾರಾಟ ಮಾಡಿದ ಕಿರಾತಕ ತಂದೆ.
ಜಯರಾಜ್ ಮದ್ಯದ ಚಟಕ್ಕೆ ದಾಸನಾಗಿದ್ದು, ಮನೆಯಲ್ಲಿ ಪ್ರತಿ ದಿನ ಪತ್ನಿ ಹೇಮಾವತಿಯೊಂದಿಗೆ ಜಗಳವಾಡುತ್ತಿದ್ದ. ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ. ಈಗಾಗಲೇ ದಂಪತಿಗೆ 4 ಗಂಡು ಮಕ್ಕಳಿದ್ದು, ಇತ್ತೀಚೆಗಷ್ಟೇ 5ನೇ ಮಗು ಜನಿಸಿತ್ತು. ಇದು ಕೂಡ ಗಂಡು ಮಗುವಾಗಿದ್ದು, ಜಯರಾಜ್ ಬ್ರೋಕರ್ ಮೂಲಕ ಮಗುವನ್ನು ಹೈದರಾಬಾದ್ ಗೆ ಕರೆತಂದು 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಮಗು ಮೃತಪಟ್ಟಿದ್ದು, ಅಲ್ಲೇ ಬಿಟ್ಟು ಬಂದೆ ಎಂದು ಮನೆಯಲ್ಲಿ ಸುಳ್ಳು ಹೇಳಿದ್ದಾನೆ.
ಈತ ಮಗುವನ್ನು ಮಾರಾಟ ಮಾಡಿದ್ದನ್ನು ಹೇಮಾವತಿ ಹಾಗೂ ಮಕ್ಕಳು ವಿರೋಧಿಸಿದ್ದಕ್ಕೆ ಅವರನ್ನು ಮನೆಯಿಂದ ಹೊರ ಹಾಕಿದ್ದಾನೆ. ಪತ್ನಿ, ಮಕ್ಕಳಿಗೆ ಅಕ್ಕಪಕ್ಕದವರು ಊಟ ಕೊಟ್ಟರೆ ಅವರೊಂದಿಗೂ ಜಗಳವಾಡುತ್ತಾನೆ ಎನ್ನಲಾಗಿದೆ. ಕರೀಂನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ, ತೆಲಂಗಾಣದಲ್ಲಿ ಮಕ್ಕಳ ಮಾರಾಟ ದಂಧೆ ನಡೆಯುತ್ತಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುವುದೆಂದು ಹೇಳಲಾಗಿದೆ.