ಡೆಹ್ರಾಡೂನ್: ಉತ್ತರಾಖಂಡ್ ನಲ್ಲಿ ಮೇಘಸ್ಪೋಟ ಸಂಭವಿಸಿದ್ದು, ಭಾರೀ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹಕ್ಕೆ ಸಿಲುಕಿ ಸುಮಾರು 40 ಮಂದಿ ಸಾವು ಕಂಡಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ.
ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದ್ದು, 10ಕ್ಕೂ ಅಧಿಕ ನದಿಗಳು ಉಕ್ಕಿ ಹರಿಯುತ್ತಿವೆ. ಸೇನೆ ಹಾಗೂ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸಿದ್ದಾರೆ. ಭಾರೀ ಮಳೆಯಾಗುತ್ತಿರುವ ಕಾರಣ, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಉತ್ತರಾಖಂಡ್ ನಲ್ಲಿ ಹೆಚ್ಚಿನ ಪವಿತ್ರ ಕ್ಷೇತ್ರಗಳಿದ್ದು, ಸದಾಕಾಲ ಪ್ರವಾಸಿಗರು, ಭಕ್ತರು ಬರುತ್ತಾರೆ. ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಪ್ರವಾಸಿಗರಿಗೆ ಮುನ್ನೆಚ್ಚರಿಕೆ ನೀಡಿ, ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ತಿಳಿಸಲಾಗಿದೆ.
ಗುಡ್ಡ ಕುಸಿತದಿಂದ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ರಾಷ್ಟ್ರೀಯ ಹೆದ್ದಾರಿ 58 ಸಂಪೂರ್ಣ ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಸಂಪರ್ಕ ರಸ್ತೆಗಳು ಬಂದ್ ಆಗಿದ್ದರಿಂದ ಸುರಕ್ಷತಾ ಕಾರ್ಯ ಕೈಗೊಳ್ಳಲು ಕಷ್ಟವಾಗಿದೆ ಎಂದು ಹೇಳಲಾಗಿದೆ.