ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ಶುಕ್ರವಾರ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಢಾಕಾದ ಆರ್ಮಿ ಸ್ಟೇಡಿಯಂನಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ಪ್ರಧಾನಿ ಶೇಖ್ ಹಸೀನಾ, ಹಿರಿಯ ರಾಜಕಾರಣಿಗಳು, ಸೇನಾ ಮುಖಂಡರು ಈ ವೇಳೆ ಉಪಸ್ಥಿತರಿದ್ದರು. ಮೃತರ ಕುಟುಂಬಗಳಿಗೆ ಶೇಖ್ ಹಸೀನಾ ಸಾಂತ್ವಾನ ಹೇಳಿದ್ರು.
ಮುಂಬೈ ದಾಳಿ ಮಾದರಿಯಲ್ಲಿಯೇ ಢಾಕಾದ ಕೆಫೆಯೊಂದರಲ್ಲಿ ಶುಕ್ರವಾರ ಪ್ರವಾಸಿಗರನ್ನು ಒತ್ತೆಯಾಳಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು. ಉಗ್ರರ ಅಟ್ಟಹಾಸಕ್ಕೆ ಭಾರತೀಯ ಯುವತಿ ಸೇರಿ 20 ಮಂದಿ ಮೃತಪಟ್ಟಿದ್ದರು. ನಂತ್ರ ನಡೆದ ರಕ್ಷಣಾ ಕಾರ್ಯದಲ್ಲಿ ಬಾಂಗ್ಲಾ ಕಮಾಂಡೋಗಳು 6 ಮಂದಿ ಉಗ್ರರನ್ನು ಹತ್ಯೆಗೈದಿದ್ದರು. ಓರ್ವ ಭಯೋತ್ಪಾದಕನನ್ನು ಸೆರೆ ಹಿಡಿದಿದ್ದರು.
ದಾಳಿಯ ಹೊಣೆಯನ್ನು ಐ.ಎಸ್. ಸಂಘಟನೆ ಹೊತ್ತುಕೊಂಡಿದೆ. ಆದ್ರೆ ಈ ಕೃತ್ಯವನ್ನು ಯಾವ ಭಯೋತ್ಪಾದನಾ ಸಂಘಟನೆ ನಡೆಸಿದೆ ಎಂಬುದರ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಸ್ಥಳೀಯ ಉಗ್ರರೇ ಈ ಕೃತ್ಯವೆಸಗಿದ್ದಾರೆ. ಇದ್ರಲ್ಲಿ ಅಂತರಾಷ್ಟ್ರೀಯ ಉಗ್ರರ ಕೈವಾಡವಿಲ್ಲ ಎಂದು ಬಾಂಗ್ಲಾ ಗೃಹ ಸಚಿವರು ಹೇಳಿದ್ದಾರೆ.