ವಿಶೇಷ ಗುರುತಿನ ಚೀಟಿ ಆಧಾರ್ ಕಾರ್ಡಿನ ಅಡಿ ಶೀರ್ಷಿಕೆಯನ್ನು ಬದಲಾಯಿಸಲಾಗಿದೆ. ಈ ಹಿಂದೆ ಇದ್ದ ಆಮ್ ಆದ್ಮಿ ಟ್ಯಾಗ್ ಲೈನನ್ನು ತೆಗೆದು ಹಾಕಲಾಗಿದೆ. ದೆಹಲಿ ಬಿಜೆಪಿ ನಾಯಕ ಸೇರಿದಂತೆ ವಿವಿಧ ಜನರ ಮನವಿ ಮನವಿ ಮೇರೆಗೆ ಈ ನಿರ್ಧಾರಕ್ಕೆ ಬರಲಾಗಿದೆ
ಆಮ್ ಆದ್ಮಿ ಪಕ್ಷದ ಹೆಸರು ಆಧಾರ್ ಕಾರ್ಡ್ ಅಡಿ ಶೀರ್ಷಿಕೆ ಎರಡೂ ಒಂದೇ ಆಗಿರುವುದರಿಂದ ಈ ತೀರ್ಮಾನಕ್ಕೆ ಬರಲಾಗಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ಅಡಿ ಶೀರ್ಷಿಕೆ ಬದಲಾಗಲಿದೆ. ‘ಮೇರಾ ಆಧಾರ್ ಮೇರಾ ಪೆಹಚಾನ್’ ಎಂದು ಬದಲಾಯಿಸಲಾಗುವುದು. ಜೂನ್ 28ರಂದು ಈ ಕುರಿತಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ ಎಂದು ದೆಹಲಿಯ ಬಿಜೆಪಿ ವಕ್ತಾರ ಅಶ್ವಿನ್ ಉಪಾಧ್ಯಾಯ್ ಹೇಳಿದ್ದಾರೆ.
ಆಧಾರ್ ಕಾರ್ಡ್ ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಸಂಬಂಧಪಟ್ಟಿದ್ದು. ಪುರುಷ, ಮಹಿಳೆ, ಬಡವ, ಶ್ರೀಮಂತ ಎಂಬ ವ್ಯತ್ಯಾಸವಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಅಡಿ ಶೀರ್ಷಿಕೆ ಬದಲಿಸಬೇಕೆಂದು ಸೆಪ್ಟೆಂಬರ್ 19,2015ರಂದು ಪ್ರಧಾನಮಂತ್ರಿ ಕಚೇರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಅಡಿ ಶೀರ್ಷಿಕೆ ಬದಲಾವಣೆಯ ಬಗ್ಗೆ ಅನೇಕ ತಿಂಗಳುಗಳಿಂದ ಚರ್ಚೆ ನಡೆಯುತ್ತಿತ್ತು.