ಬೆಂಗಳೂರು: ಭೀಕರ ಅಪಘಾತ ಸಂಭವಿಸಿದರೂ, ಸೀಟ್ ಬೆಲ್ಟ್ ಕಾರಣದಿಂದ ಇಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಖಾಸಗಿ ಕಂಪನಿ ಉದ್ಯೋಗಿ ನಾಗರಾಜ್ ಹಾಗೂ ಕ್ಯಾಬ್ ಚಾಲಕ ಗಣೇಶ್ ಅಪಾಯದಿಂದ ಪಾರಾದವರು.
ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ರಾತ್ರಿ 12 ಗಂಟೆಗೆ ಅಪಘಾತ ಸಂಭವಿಸಿದ್ದು, ಸತತ 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಇಬ್ಬರನ್ನು ರಕ್ಷಿಸಲಾಗಿದೆ. ಕೆಲಸ ಮುಗಿಸಿ ನಾಗರಾಜ್ ಮನೆಗೆ ಹೊರಟಿದ್ದು, ಶಿವಾನಂದ್ ಸರ್ಕಲ್ ನಲ್ಲಿ ಕಲ್ಲು ತುಂಬಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಅಲ್ಲದೇ, ಕಾರನ್ನು ಸುಮಾರು 20 ಮೀಟರ್ ವರೆಗೆ ಎಳೆದುಕೊಂಡು ಹೋಗಿ, ವಿದ್ಯುತ್ ಕಂಬಕ್ಕೆ, ನಂತರ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಕಾರು ಟಿಪ್ಪರ್ ಅಡಿಗೆ ಸಿಲುಕಿ ನುಜ್ಜುಗುಜ್ಜಾಗಿದೆ.
ಚಾಲಕ ಗಣೇಶ್ ಹಾಗೂ ಉದ್ಯೋಗಿ ನಾಗರಾಜ್ ಅದರಲ್ಲೇ ಸಿಲುಕಿದ್ದಾರೆ. ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿದ್ದಾರೆ. ಗಣೇಶ್ ಹಾಗೂ ನಾಗರಾಜ್ ನೋವು ತಡೆಯಲಾಗದೇ ಮನವಿ ಮಾಡಿದ್ದರಿಂದ ವೈದ್ಯರು ನೋವು ನಿವಾರಕ ಇಂಜೆಕ್ಷನ್ ಕೊಟ್ಟಿದ್ದಾರೆ ಎನ್ನಲಾಗಿದೆ.
ಕಾರ್ಯಾಚರಣೆಯಲ್ಲಿ 6 ಅಗ್ನಿಶಾಮಕ ವಾಹನ, 2 ಕ್ರೇನ್ ಸುಮಾರು 100ಕ್ಕೂ ಅಧಿಕ ಸಿಬ್ಬಂದಿ ಭಾಗವಹಿಸಿದ್ದರು. ಕಾರು ನುಜ್ಜುಗುಜ್ಜಾಗಿ ಇಬ್ಬರ ಕಾಲುಗಳು ಸಿಲುಕಿದ್ದು, ಸೀಟ್ ಬೆಲ್ಟ್ ಹಾಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.