ಸ್ಮಾರ್ಟ್ ಫೋನ್ ಅನ್ನು ಕೇವಲ 251 ರೂಪಾಯಿಗಳಿಗೆ ನೀಡುವುದಾಗಿ ನೋಯ್ಡಾ ಮೂಲದ ರಿಂಗಿಂಗ್ ಬೆಲ್ಸ್ ಕಂಪನಿ ಹೇಳಿಕೊಂಡಾಗ ಅದೊಂದು ಬೋಗಸ್ ಕಂಪನಿ ಎಂದು ಹೀಗಳೆದವರೇ ಹೆಚ್ಚು. ಬೆಲೆಯ ಕಾರಣಕ್ಕಾಗಿ ವಿವಾದ ಹುಟ್ಟು ಹಾಕಿದ್ದ ಈ ಸ್ಮಾರ್ಟ್ ಫೋನ್, ಗ್ರಾಹಕರ ಕೈ ಸೇರುವ ಕಾಲ ಸನ್ನಿಹಿತವಾಗಿದೆ.
ಈಗಾಗಲೇ ಎರಡು ಬಾರಿ ಸ್ಮಾರ್ಟ್ ಫೋನ್ ಬಿಡುಗಡೆ ದಿನಾಂಕವನ್ನು ಮುಂದೆ ಹಾಕಿದ್ದ ರಿಂಗಿಂಗ್ ಬೆಲ್ಸ್ ಕಂಪನಿ ಅಂತಿಮವಾಗಿ ಜುಲೈ 7 ರಿಂದ ಗ್ರಾಹಕರಿಗೆ ವಿತರಿಸುವುದಾಗಿ ಪ್ರಕಟಿಸಿದೆ. ಕಂಪನಿ ಬಳಿ ಈಗ 2 ಲಕ್ಷ ಸ್ಮಾರ್ಟ್ ಫೋನ್ ಗಳ ಸ್ಟಾಕ್ ಇದ್ದು, ಲಾಟರಿ ಮೂಲಕ ಆಯ್ಕೆ ಮಾಡಿ ಗ್ರಾಹಕರಿಗೆ ನೀಡಲಾಗುತ್ತದೆ ಎನ್ನಲಾಗಿದೆ. ಅಲ್ಲದೇ ಪ್ರತಿ ರಾಜ್ಯಕ್ಕೂ 10 ಸಾವಿರ ಸ್ಮಾರ್ಟ್ ಫೋನ್ ಗಳನ್ನು ನೀಡಲು ಯೋಜಿಸಲಾಗಿದೆ.
ಬಿಡುಗಡೆಗೂ ಪೂರ್ವಭಾವಿಯಾಗಿ ಈಗ ತಯಾರಿಸಲಾಗಿರುವ ಸ್ಮಾರ್ಟ್ ಫೋನ್ ಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಪ್ರದರ್ಶಿಸಲಾಗಿದ್ದು, ನಿರೀಕ್ಷೆಗಿಂತ ಇದು ಚೆನ್ನಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಸ್ಮಾರ್ಟ್ ಫೋನ್ ಘೋಷಣೆ ಸಂದರ್ಭದಲ್ಲಿ ಬೇರೊಂದು ಕಂಪನಿಯ ಮಾಡೆಲ್ ಪ್ರದರ್ಶಿಸಿ ಟೀಕೆಗೆ ಗುರಿಯಾಗಿದ್ದ ರಿಂಗಿಂಗ್ ಬೆಲ್ಸ್ ಕಂಪನಿ, ಈಗ ಗ್ರಾಹಕರಿಗೆ ವಿತರಿಸುತ್ತಿರುವ ಸ್ಮಾರ್ಟ್ ಫೋನ್ ಅದಕ್ಕಿಂತಲೂ ಉತ್ತಮವಾಗಿದೆ ಎಂದು ಹೇಳಲಾಗಿದೆ. 251 ರೂಪಾಯಿಗಳಿಗೆ ಸ್ಮಾರ್ಟ್ ಫೋನ್ ನೀಡುತ್ತಿರುವ ಕಾರಣ ಕಂಪನಿ ನಷ್ಟವನ್ನನುಭವಿಸಲಿದ್ದು, ಆದರೆ ಮುಂದೆ ಗ್ರಾಹಕರ ಸಂಖ್ಯೆ ಹೆಚ್ಚಾದಲ್ಲಿ ಆ ನಷ್ಟವನ್ನು ಸರಿದೂಗಿಸುವ ವಿಶ್ವಾಸವನ್ನು ಕಂಪನಿ ಹೊಂದಿದೆ.