ಅಹಮದಾಬಾದ್: ಪೆಟ್ರೋಲ್ ಬಂಕ್ ನಲ್ಲಿ ಮೊಬೈಲ್ ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ಗೂಂಡಾಗಳು, ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ. ಘಟನೆಯ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ಅಹಮದಾಬಾದ್ ನ ಸರ್ದಾರ್ ಪಟೇಲ್ ರಸ್ತೆಯಲ್ಲಿರುವ ಶ್ರೀರಾಮ ಪೆಟ್ರೋಲ್ ಬಂಕ್ ಗೆ ಬಂದ ದುಷ್ಕರ್ಮಿಗಳು ತಮ್ಮ ವಾಹನಕ್ಕೆ ಪೆಟ್ರೋಲ್ ತುಂಬಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಲ್ಲೊಬ್ಬ ಮೊಬೈಲ್ ನಲ್ಲಿ ಮಾತನಾಡಲು ಆರಂಭಿಸಿದ್ದು, ಬಂಕ್ ಸಿಬ್ಬಂದಿ ಫೋನ್ ಆಫ್ ಮಾಡಿ ಎಂದು ಹೇಳಿದ್ದಾರೆ. ಆಗ ಸಣ್ಣ ಜಗಳವಾಗಿದೆ. ವಾಪಸ್ ಹೋದ ದುಷ್ಕರ್ಮಿಗಳು ತಡರಾತ್ರಿ ಗುಂಪುಗೂಡಿ ಬಂದಿದ್ದು, ಲಾಂಗ್, ತಲ್ವಾರ್, ದೊಣ್ಣೆಗಳಿಂದ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಭಯಭೀತರಾದ ಸಿಬ್ಬಂದಿ ಒಳಗೆ ಹೋಗಿ ಬಾಗಿಲು ಹಾಕಿಕೊಂಡರೂ, ತಲ್ವಾರ್, ಕಲ್ಲುಗಳಿಂದ ಬಾಗಿಲು ಮುರಿದುಹಾಕಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಬಂಕ್ ನಲ್ಲಿ ರಕ್ತದೋಕುಳಿಯೇ ಹರಿದಿದೆ. ಸಿಬ್ಬಂದಿಯನ್ನು ಅಟ್ಟಾಡಿಸಿಕೊಂಡು ದುಷ್ಕರ್ಮಿಗಳು ಹಲ್ಲೆ ಮಾಡಿರುವ ದೃಶ್ಯ ಬೆಚ್ಚಿಬೀಳಿಸುವಂತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.