ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಹೇಳಿಕೆ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನದ ವಿರುದ್ಧ ಫೇಸ್ಬುಕ್ ನಲ್ಲಿ ಹೇಳಿಕೆ ನೀಡಿರುವ ಕಾಟ್ಜು, ಭಾರತ- ಪಾಕ್ ನಡುವೆ ಬಿಹಾರವನ್ನೂ ಎಳೆದು ತಂದಿದ್ದಾರೆ. ಇದು ಬಿಹಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕಾಟ್ಜು ಹೇಳಿಕೆಗೆ ಸಿಕ್ಕಾಪಟ್ಟೆ ಕಮೆಂಟ್ ಬಂದಿದೆ. ಮೊದಲು ತನ್ನ ಮಾತುಗಳನ್ನು ಸಮರ್ಥಿಸಿಕೊಂಡ ಕಾಟ್ಜು ನಂತ್ರ ತಾನು ಜೋಕ್ ಮಾಡ್ದೆ ಎಂದಿದ್ದಾರೆ.
ಒಂದು ಷರತ್ತಿನ ಮೇಲೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬಹುದು. ಪಾಕಿಸ್ತಾನ ಕಾಶ್ಮೀರದ ಜೊತೆ ಬಿಹಾರವನ್ನೂ ಪಡೆಯಬೇಕೆಂದು ಕಾಟ್ಜು ಫೇಸ್ಬುಕ್ ನಲ್ಲಿ ಹೇಳಿದ್ದೇ ಈಗ ವಿವಾದ ಹುಟ್ಟು ಹಾಕಿದೆ.
”ಪಾಕಿಸ್ತಾನಿಗಳೇ, ಒಂದೇ ಬಾರಿ ನಿಮ್ಮ ಸಮಸ್ಯೆಗೆ ಅಂತ್ಯ ಹಾಡೋಣ. ಒಂದು ಷರತ್ತಿನ ಮೇಲೆ ಕಾಶ್ಮೀರವನ್ನು ನಿಮಗೆ ನೀಡ್ತೇವೆ. ನೀವು ಕಾಶ್ಮೀರದ ಜೊತೆ ಬಿಹಾರವನ್ನೂ ಪಡೆಯಬೇಕು. ಇದೊಂದು ಪ್ಯಾಕೇಜ್ ಡೀಲ್. ಕಾಶ್ಮೀರದ ಜೊತೆ ಬಿಹಾರವನ್ನೂ ಪಡೆಯಿರಿ. ಇಲ್ಲ ನಿಮಗೇನೂ ಸಿಗಲ್ಲ” ಹೀಗಂತ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ ಕಾಟ್ಜು.
ಇಷ್ಟೇ ಅಲ್ಲ ರಾಜಕೀಯ ವಿವಾದ ಹುಟ್ಟುಹಾಕುವಂತಹ ಹೇಳಿಕೆಯನ್ನೂ ಕಾಟ್ಜು ಬರೆದುಕೊಂಡಿದ್ದಾರೆ. ”ಅಟಲ್ ಬಿಹಾರಿ ವಾಜಪೇಯಿ ಆಗ್ರಾ ಶೃಂಗಸಭೆಯಲ್ಲಿ ಮುಶ್ರಫ್ ಮುಂದೆ ಇಂತಹದ್ದೇ ಒಂದು ಡೀಲ್ ಇಟ್ಟಿದ್ದರು. ಆದ್ರೆ ಮೂರ್ಖತನದಿಂದ ಮುಶ್ರಫ್ ಇದನ್ನು ತಿರಸ್ಕರಿಸಿದ್ದರು. ಈಗ ಮತ್ತೆ ಇಂಥ ಆಫರ್ ಸಿಗ್ತಾ ಇದೆ” ಎಂದಿದ್ದಾರೆ.
”ಇಂಗ್ಲೀಷ್ ಶಿಕ್ಷಕರೊಬ್ಬರು, ಭಾರತಕ್ಕೆ ಪಾಕಿಸ್ತಾನದಿಂದಲ್ಲ, ಬಿಹಾರದಿಂದ ಆಪತ್ತಿದೆ ಎಂದಿದ್ದರು. ಇದ್ರ ಅರ್ಥ ನನಗೆ ಇನ್ನೂ ಗೊತ್ತಾಗಿಲ್ಲ” ಎಂದು ಬರೆದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾಗ್ತಿದ್ದಂತೆ, ”ಫೇಸ್ಬುಕ್ ನಲ್ಲಿ ಬಿಹಾರ್ ಬಗ್ಗೆ ಜೋಕ್ ಮಾಡಬಾರದೆಂದು ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿ” ಎಂದು ಕಾಟ್ಜು ಕಮೆಂಟ್ ಹಾಕಿದ್ದಾರೆ.