ಮಹಿಳೆ ಮೇಲೆ, ಬಾಲಕಿಯರ ಮೇಲೆ, ವೃದ್ಧೆಯರ ಮೇಲೆ ಅತ್ಯಾಚಾರ ನಡೆದ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದೀಗ ಉತ್ತರ ಪ್ರದೇಶದ ಶಹರನ್ ಪುರದಲ್ಲಿ 23 ವರ್ಷದ ಮಹಿಳೆಯೊಬ್ಬಳು 16 ವರ್ಷದ ಬಾಲಕನ ಮೇಲೆ ಅತ್ಯಾಚಾರ ಮಾಡಿದ ವಿಲಕ್ಷಣ ಘಟನೆ ನಡೆದಿದೆ.
ಮಹಿಳೆ ವಿರುದ್ಧ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಬಾಲಕನ ಮೇಲೆ ದೌರ್ಜನ್ಯ ಎಸಗಿದ್ದಲ್ಲದೆ ಅತ್ಯಾಚಾರ ದೃಶ್ಯಗಳನ್ನೆಲ್ಲ ಆರೋಪಿ ಮಹಿಳೆ ಚಿತ್ರೀಕರಿಸಿಕೊಂಡಿದ್ದಾಳೆ ಎನ್ನಲಾಗಿದೆ. ಅಷ್ಟೇ ಅಲ್ಲ ತನ್ನನ್ನು ಮದುವೆ ಆಗದೇ ಇದ್ದರೆ ಈ ದೃಶ್ಯಗಳನ್ನು ಇಂಟರ್ನೆಟ್ ನಲ್ಲಿ ಹರಿಬಿಡುವುದಾಗಿ ಬಾಲಕನಿಗೆ ಬೆದರಿಸಿದ್ದಾಳೆಂದು ಆತನ ಕುಟುಂಬದವರು ಆರೋಪ ಮಾಡಿದ್ದಾರೆ.
ಮಹಿಳೆ ಮತ್ತು ಬಾಲಕನ ಮಧ್ಯೆ ನಡೆದ ಫೋನ್ ಸಂಭಾಷಣೆ, ಎಸ್ ಎಂ ಎಸ್ ಮತ್ತು ವಾಟ್ಸ್ ಆ್ಯಪ್ ಸಂದೇಶಗಳನ್ನೆಲ್ಲ ಪರಿಶೀಲನೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿ ಟಿ.ಎಸ್.ಭಾತಿ ತಿಳಿಸಿದ್ದಾರೆ. ಇದನ್ನೆಲ್ಲ ನೋಡ್ತಾ ಇದ್ರೆ ತನ್ನನ್ನು ಮದುವೆಯಾಗುವಂತೆ ಮಹಿಳೆ ಬಾಲಕನನ್ನು ಪುಸಲಾಯಿಸಿದಂತೆ ತೋರುತ್ತದೆ ಎಂದವರು ಹೇಳಿದ್ದಾರೆ.