ಒಲಂಪಿಕ್ಸ್ ನ ಬ್ಯಾಡ್ಮಿಂಟನ್ ಸೆಮಿಫೈನಲ್ ನಲ್ಲಿ ಜಪಾನ್ ಆಟಗಾರ್ತಿ ನೊಜೊಮಿ ಒಕುಹರ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ ಫೈನಲ್ ಪ್ರವೇಶಿಸಿರುವ ಭಾರತದ ಹೆಮ್ಮೆಯ ಕುವರಿ ಪಿ.ವಿ. ಸಿಂಧು ಅವರಿಗೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ಭರ್ಜರಿ ಕೊಡುಗೆ ಘೋಷಿಸಿದ್ದಾರೆ.
ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಉದ್ಯಮಿ ವಿ. ಚಾಮುಂಡೇಶ್ವರನಾಥ್, ತಾವು ಒಲಂಪಿಕ್ಸ್ ಆರಂಭಕ್ಕೂ ಮುನ್ನವೇ ಪದಕ ಗೆಲ್ಲುವ ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ಕ್ರೀಡಾಪಟುಗಳಿಗೆ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದ್ದು, ಅದರಂತೆ ಇದೀಗ ಪದಕದ ಹೊಸ್ತಿಲಿನಲ್ಲಿರುವ ಸಿಂಧು ಅವರಿಗೆ ನೀಡುವುದಾಗಿ ತಿಳಿಸಿದ್ದಾರೆ.
ಫೈನಲ್ ನಲ್ಲೂ ಜಯ ಗಳಿಸುವ ಮೂಲಕ ಸಿಂಧು ಚಿನ್ನದ ಪದಕ ಪಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಚಾಮುಂಡೇಶ್ವರನಾಥ್, ಅವರು ಭಾರತಕ್ಕೆ ಮರಳುತ್ತಿದ್ದಂತೆಯೇ ಹೈದರಾಬಾದಿನಲ್ಲಿ ನಡೆಸಲಾಗುವ ಅದ್ದೂರಿ ಸಮಾರಂಭದಲ್ಲಿ ಈ ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ಸಮಾರಂಭಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಕರೆಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.