ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ.ಎ.ಮೊಯಿದ್ದೀನ್ ಅವರಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ.
ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ಅವರು, ಈ ಕುರಿತು ಮಾಹಿತಿ ನೀಡಿದ್ದು, ಡಿ ದೇವರಾಜ ಅರಸು ಪ್ರಶಸ್ತಿಯನ್ನು ಬಿ.ಎ.ಮೊಯಿದ್ದೀನ್ ಅವರಿಗೆ ನೀಡಲಾಗಿದೆ. ಅರಸು ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಾ.ಕೃಷ್ಣಮೂರ್ತಿ ಹನೂರು ಅವರ ನೇತೃತ್ವದ ಆಯ್ಕೆ ಸಮಿತಿ ಮೊಯಿದ್ದೀನ್ ಹೆಸರನ್ನು ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ. ಅರಸು ಅವರ ತತ್ವಾದರ್ಶ ಮೈಗೂಡಿಸಿಕೊಂಡ ವ್ಯಕ್ತಿಗಳಿಗೆ ನೀಡುವ ಈ ಪ್ರಶಸ್ತಿ 2 ಲಕ್ಷ ರೂ. ನಗದು ಒಳಗೊಂಡಿದೆ ಎಂದಿದ್ದಾರೆ.
ದೇವರಾಜ ಅರಸು ವ್ಯಕ್ತಿತ್ವ ಪರಿಚಯಿಸುವ ಚಲನಚಿತ್ರವನ್ನು ಸರ್ಕಾರದಿಂದ 3 ಕೋಟಿ ರೂ ವೆಚ್ಛದಲ್ಲಿ ನಿರ್ಮಿಸಲಾಗುವುದು ಎಂದು ಸಚಿವ ಆಂಜನೇಯ ತಿಳಿಸಿದ್ದಾರೆ. ಈ ಬಗ್ಗೆ ಪ್ರಕ್ರಿಯೆ ನಡೆದಿದ್ದು, ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.