ತಾಳವಾಡಿ: ಪ್ರೀತಿ, ಪ್ರೇಮ ಹೇಗೆಲ್ಲಾ ಆರಂಭವಾಗುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಕೆಲವೊಮ್ಮೆ ಮದುವೆಯಾದವರೂ ಪ್ರೀತಿಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸುತ್ತಾರೆ. ಮದುವೆಯ ನಂತರವೂ ಪ್ರೀತಿಯ ಬಲೆಗೆ ಬಿದ್ದ ಮಹಿಳೆ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ತಮಿಳುನಾಡಿನಲ್ಲಿ ಕರ್ನಾಟಕದ ಮೂಲದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಅಮಚವಾಡಿ ಗ್ರಾಮದ 24 ವರ್ಷದ ಪುರುಷ ಹಾಗೂ 20 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು. ತಾಳವಾಡಿ ಸಮೀಪದ ಗುಮಟಾಪುರದ ಸಮೀಪ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಗೆ 2 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ಆಕೆ ಈ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.
ಇವರ ಪ್ರೀತಿ ಮನೆಯವರಿಗೆ ಗೊತ್ತಾದ ಕಾರಣಕ್ಕೆ ತಮಿಳುನಾಡಿಗೆ ತೆರಳಿ ತಾಳವಾಡಿ ಸಮೀಪ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.